ADVERTISEMENT

ಶುಭವಾದ ಶುಕ್ರವಾರ ಮಳೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 12:43 IST
Last Updated 1 ಜೂನ್ 2013, 12:43 IST

ಮೈಸೂರು: ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಶುಕ್ರವಾರವೂ ಮುಂದುವರಿದಿದ್ದು, ನಗರವೂ ಸೇರಿದಂತೆ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ.

ಬೆಳಿಗ್ಗೆಯಿಂದಲೇ ಬಿಸಿಲಿನ ತಾಪ ಇರಲಿಲ್ಲ. ಹೀಗಾಗಿ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಸಂಜೆ ಆರಂಭವಾದ ಗುಡುಗುಸಹಿತ ಮಳೆ ರಾತ್ರಿಯವರೆಗೂ ಎಡಬಿಡದೆ ಸುರಿಯಿತು. ಕೆಲ ದಿನಗಳ ಹಿಂದೆ ಕೆಲ ಹೊತ್ತು ಸುರಿದು ನಿಲ್ಲುತ್ತಿದ್ದ ಮಳೆ ಶುಕ್ರವಾರ ನಿರಂತರವಾಗಿ ಸುರಿದು ಶುಭ ಸೂಚನೆ ನೀಡಿತು. ಇದರ ಪರಿಣಾಮ ಮನೆಯಿಂದ ಆಚೆ ಕಾಲಿಡದ ಅನೇಕರು ಮನೆಯಲ್ಲಿ ಕುಳಿತೇ ಮಳೆ ನೋಡಿ ನಲಿದರು. ಚಿಣ್ಣರು ಮಳೆಯಲ್ಲಿಯೇ ಆಟವಾಡಿ ಖುಷಿಪಟ್ಟರು. ಮಳೆಯೊಂದಿಗೆ ಸಣ್ಣಗೆ ಸುಳಿಯುತ್ತಿದ್ದ ತಂಗಾಳಿಗೆ ನಡುಗಿದವರಿಗೆ ಸಂಜೆಯ ಚಹಾ ಹಾಗೂ ಕಾಫಿಯೊಂದಿಗೆ ಬಿಸಿ ಬಿಸಿ ಬೋಂಡಾ ಹಾಗೂ ಬಜ್ಜಿ ಬೋನಸ್ ಆಗಿ ಸಿಕ್ಕವು.

ಈ ಬಾರಿಯ ಬೇಸಿಗೆಯು ಬಳ್ಳಾರಿಯ ಬಿಸಿಲಿನ ಅನುಭವ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ವಿಜಾಪುರ ನೆನಪಿಸುವ ಹಾಗಿದ್ದ ಪರಿಸ್ಥಿತಿಯನ್ನು ಶುಕ್ರವಾರದ ಮಳೆ ನಗರದ ಅಸಂಖ್ಯರ ಬಾಡಿದ ಮುಖಗಳಲ್ಲಿ ನಗು ಅರಳಿಸಿತು. ಅಂತೂ ಸುರಿದ ಮಳೆಗೆ ತಂಪಾದ ಇಳೆಯೊಂದಿಗೆ ಸಾರ್ವಜನಿಕರೂ ತಂಪಾದರು.

ಮಳೆಯ ವಿವರ: ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ 52.5 (ಅತಿ ಹೆಚ್ಚು ), ತಿ.ನರಸೀಪುರದಲ್ಲಿ 3 (ಅತಿ ಕಡಿಮೆ) ಮಿಲಿ ಮೀಟರ್ ಮಳೆ ದಾಖಲಾಗಿದೆ. ಕೆ.ಆರ್. ನಗರದಲ್ಲಿ 50 ಮಿ.ಮೀ, ಎಚ್.ಡಿ.ಕೋಟೆಯಲ್ಲಿ 41 ಮಿ.ಮೀ, ಪಿರಿಯಾಪಟ್ಟಣದಲ್ಲಿ 40.6 ಮಿ.ಮೀ, ನಂಜನಗೂಡಿನಲ್ಲಿ 35 ಮಿ.ಮೀ, ಮೈಸೂರು ನಗರದಲ್ಲಿ 23 ಮಿ.ಮೀ. ಮಳೆ ಸುರಿದಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.