ADVERTISEMENT

ಶ್ರೀರಾಂಪುರ: ಮೂರು ದಿನಕ್ಕೊಮ್ಮೆ ನೀರು

ಪಂಡಿತ್ ನಾಟಿಕರ್
Published 19 ಡಿಸೆಂಬರ್ 2012, 8:50 IST
Last Updated 19 ಡಿಸೆಂಬರ್ 2012, 8:50 IST

ಕೆ.ಆರ್.ನಗರ: ತಾಲ್ಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ವಿದ್ಯುತ್ ಅಭಾವ ಉಂಟಾಗಿದ್ದು, ಹಗಲು 2-3 ಗಂಟೆ, ರಾತ್ರಿ ಕೇವಲ 3ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗಿದೆ.

ಮೂರ‌್ನಾಲ್ಕು ದಿನಗಳಿಗೊಮ್ಮೆ ಕೇವಲ ಅರ್ಧ ಗಂಟೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಗ್ರಾಮಸ್ಥರು ಬೋರ್‌ವೆಲ್ (ಕೈಪಂಪ್) ಮೊರೆ ಹೋಗುವುದು ಸಾಮಾನ್ಯವಾಗಿದೆ.

ಆದರೆ ಹತ್ತಾರು ವರ್ಷಗಳಿಂದ ಚರಂಡಿ ನೀರನ್ನು ಈ ನಾಲೆಗೆ ಬಿಡಲಾಗುತ್ತಿದೆ. ಇದರಿಂದ ನಾಲೆ ನೀರು ಕೂಡ ಕಲುಷಿತಗೊಂಡಿದೆ. ಕೆಲವೊಮ್ಮೆ ನಾಲೆ ನೀರು ಕುಡಿಯುವ ಗ್ರಾಮಸ್ಥರು ರೋಗರುಜಿನಗಳಿಂದ ಬಳಲುವಂತಾಗಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 13 ಕಿ.ಮೀ.ಗೂ ಹೆಚ್ಚು ದೂರ ಇರುವ ಈ ಗ್ರಾಮ ಕುಪ್ಪೆಹಂತ (ಚುಂಚನಕಟ್ಟೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಇಲ್ಲಿರುವ 1,500ಕ್ಕೂ ಹೆಚ್ಚು ಜನರಿಗೆ ಸೌಲಭ್ಯವೆನ್ನುವುದು ಮರೀಚಿಕೆಯಾಗಿದೆ.

ಬಹುತೇಕ ಗ್ರಾಮಸ್ಥರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಗ್ರಾಮದ ಹಲವು ಬೀದಿಗಳಿಗೆ ಡಾಂಬರ್ ಸಹ ಹಾಕಿಲ್ಲ. ಹಲವು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆಯೂ ಇಲ್ಲ.
 

2012-13ನೇ ಸಾಲಿನ ಐದನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯಡಿ ಶ್ರೀರಾಂಪುರವೂ ಸೇರಿದೆ.  ಜನಪ್ರತಿನಿಧಿಗಳು, ಅಧಿಕಾರಿಗಳು ಆಸಕ್ತಿ ವಹಿಸಿ ಯೋಜನೆ ಸಮರ್ಪಕವಾಗಿ ಜಾರಿಯಾಗುವಂತೆ ಮಾಡಿದರೆ ಕೆಲವಾದರೂ ಸೌಲಭ್ಯ ಸಿಗಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT