ADVERTISEMENT

ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 7:35 IST
Last Updated 8 ಅಕ್ಟೋಬರ್ 2012, 7:35 IST

ಮೈಸೂರು: ಸಂಶೋಧನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು (ಯುಜಿಸಿ) ವಿವಿಧ ಯೋಜನೆಗಳ ಮೂಲಕ ಅನುದಾನ ಬಿಡುಗಡೆ ಮಾಡುತ್ತಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯೊಂದರಲ್ಲೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂಸ್ಥೆಯ ಕನ್ನಡ, ಭಾಷಾ ವಿಜ್ಞಾನ, ಜಾನಪದ ಹಾಗೂ ದಕ್ಷಿಣ ಭಾರತೀಯ ಅಧ್ಯಯನ ವಿಭಾಗಗಳಲ್ಲಿ 108 ಸಂಶೋಧಕರು ಪ್ರವೇಶ ಪಡೆದಿದ್ದಾರೆ. ಈ ಪೈಕಿ 83 ಮಂದಿ ವಿವಿಧ ಶಿಷ್ಯ ವೇತನಕ್ಕೆ ಅರ್ಹತೆ ಪಡೆದಿದ್ದು, ಪೂರ್ಣಾವಧಿ ಸಂಶೋಧಕರಿಗೆ ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಿಂದ ಮಾಸಿಕ ರೂ.8 ಸಾವಿರ ವೇತನ ನೀಡಲಿದೆ.

 

ವಿಭಾಗ         ಜೆಆರ್‌ಎಫ್  ಆರ್‌ಜಿಎನ್‌ಎಫ್  ಎಸ್‌ಸಿ/ಎಸ್‌ಟಿ ವೇತನ
1. ಕನ್ನಡ-        44         14                 04
2. ಜಾನಪದ-    -            06                  -
3. ಭಾಷಾ ವಿಜ್ಞಾನ-  02    09                 -
4. ದ.ಭಾ.ಅ.        -          03                01

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಸೆಳೆಯುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಕಿರಿಯ ಶಿಷ್ಯ ವೇತನ (ಜೆಆರ್‌ಎಫ್- ರೂ. 21 ಸಾವಿರ) ನೀಡುತ್ತಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆ ಹೊಂದಿದವರು ಇದಕ್ಕೆ ಅರ್ಹರಾಗಿರುತ್ತಾರೆ.
 
ಅಲ್ಲದೇ, ಎರಡು ವರ್ಷಗಳಿಂದ ಬಿಡುಗಡೆ ಮಾಡುತ್ತಿರುವ ರಾಜೀವ್‌ಗಾಂಧಿ ರಾಷ್ಟ್ರೀಯ ವಿದ್ಯಾರ್ಥಿ ವೇತನ (ಆರ್‌ಜಿಎನ್‌ಎಫ್- ರೂ. 21 ಸಾವಿರ) ಕೂಡ ಸಂಶೋಧಕರನ್ನು ಆಕರ್ಷಿಸಿದೆ. ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ವಿದ್ಯಾರ್ಥಿ ವೇತನಕ್ಕೆ (ರೂ.5 ಸಾವಿರ) ಹಲವು ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಇದರ ಬೆನ್ನಲ್ಲೇ ಪೂರ್ಣಾವಧಿ ಸಂಶೋಧಕರಿಗೆ ಮಾಸಿಕ ವೇತನ ನೀಡುವಂತೆ ಯುಜಿಸಿ ಶಿಫಾರಸು ಮಾಡಿದ್ದು, ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ವೇತನದ ಅವಶ್ಯ ಏಕೆ?
ಸಂಶೋಧನೆಗೆ ಅಗತ್ಯವಾದ ಪುಸ್ತಕ ಖರೀದಿಸಲು, ಶುಲ್ಕ ಪಾವತಿಸಲು, ಕ್ರೇತ್ರ ಕಾರ್ಯ ಕೈಗೊಳ್ಳಲು ಹಣದ ಅವಶ್ಯಕತೆ ಇರುತ್ತದೆ. ಇದರಿಂದಾಗಿ ಹಲವು ವಿದ್ಯಾರ್ಥಿಗಳು ಸಂಶೋಧನೆಗೆ ಆಸಕ್ತಿ ತೋರುತ್ತಿರಲಿಲ್ಲ. ಸಂಶೋಧನೆ ಮಾಡುತ್ತಿದ್ದವರಲ್ಲಿ ಕೂಡ ಅನೇಕರು ಅಲ್ಪಾವಧಿಯಲ್ಲಿ ಪ್ರಬಂಧ ಮಂಡಿಸಲು ಮುಂದಾಗುತ್ತಿದ್ದರು. ಈ ಸಮಸ್ಯೆಯನ್ನು ಅರಿತ ಯುಜಿಸಿ ಎಲ್ಲ ಪೂರ್ಣಾವಧಿ ಸಂಶೋಧಕರಿಗೆ ಮಾಸಿಕ ವೇತನ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಆಶಾಭಾವನೆ ಮೂಡಿಸಿದೆ.

ಮಹಾರಾಜ ಕಾಲೇಜು, ಹಾಸನ, ಮಂಡ್ಯ ಸ್ನಾತಕೋತ್ತರ ಕೇಂದ್ರ, ಭಾಷಾ ಸಂಸ್ಥಾನದ ಅಧ್ಯಾಪಕರೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಯುಜಿಸಿ ನಿಯಮದ ಪ್ರಕಾರ ಒಬ್ಬ ಅಧ್ಯಾಪಕ ಗರಿಷ್ಠ 8 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು. ಕೆಲ ಅಧ್ಯಾಪಕರ ಬಳಿ 10ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡಿದ್ದಾರೆ.

`ಮಾಸಿಕ ವೇತನ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಅಷ್ಟೂ ಮಂದಿಯನ್ನು ವಿವಿಧ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಲು ಕಷ್ಟವಾಗುತ್ತಿದೆ. ಆದರೆ ಮಾರ್ಗದರ್ಶಕರ ಕೊರತೆ ಎದುರಾಗಿಲ್ಲ~ ಎನ್ನುತ್ತಾರೆ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎನ್.ಎಂ.ತಳವಾರ್.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.