ADVERTISEMENT

ಸಾಡೆ ರಸ್ತೆ, ಮೀನಾ ಬಜಾರ್‌ಗೆ ದಾಂಗುಡಿ

‘ಈದ್‌ ಉಲ್‌ ಫಿತ್ರ್‌’ ಹಬ್ಬಕ್ಕೆ ಮುಸ್ಲಿಮರ ಸಿದ್ಧತೆ; ನಗರದಲ್ಲಿ ಖರೀದಿಯ ಭರಾಟೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 10:42 IST
Last Updated 10 ಜೂನ್ 2018, 10:42 IST

ಮೈಸೂರು: ರಂಜಾನ್‌ ತಿಂಗಳು ಕೊನೆಗೊಳ್ಳಲು ಇನ್ನು ಕೇವಲ ಐದು ದಿನಗಳು ಬಾಕಿ ಉಳಿದಿದ್ದು, ನಗರದ ಮುಸ್ಲಿಮರು ‘ಈದ್‌ ಉಲ್‌ ಫಿತ್ರ್’ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಹಬ್ಬದ ವಸ್ತುಗಳ ಖರೀದಿಗೆ ಪ್ರಶಸ್ತ ತಾಣ ಎನಿಸಿರುವ ಮೀನಾ ಬಜಾರ್‌ ಮತ್ತು ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ಜೋರಾಗಿದೆ. ಹಬ್ಬದ ಮುನ್ನಾದಿನ ತಡರಾತ್ರಿಯವರೆಗೂ ಇಲ್ಲಿ ಭರ್ಜರಿ ವ್ಯಾಪಾರ ಮುಂದುವರೆಯಲಿದೆ.

ಈ ಬಾರಿಯ ರಂಜಾನ್‌ ಉಪವಾಸ ಜೂನ್‌ 14 ಅಥವಾ 15ರಂದು ಕೊನೆಗೊಳ್ಳಲಿದೆ. ಮರುದಿನ ಮುಸ್ಲಿಮರು ಸಂಭ್ರಮದಿಂದ ‘ಈದ್‌ ಉಲ್‌ ಫಿತ್ರ್’ ಹಬ್ಬ ಆಚರಿಸುವರು.

ADVERTISEMENT

ರಂಜಾನ್‌ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಖರೀದಿಯ ಭರಾಟೆ ಜೋರು ಇರುತ್ತದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉಡುಪು, ಪಾದರಕ್ಷೆ ದೊರೆಯುವ ಕಾರಣ ಬಡವರು ಮತ್ತು ಮಧ್ಯಮವರ್ಗದವರು ಹಬ್ಬದ ಖರೀದಿಗೆ ಇಲ್ಲಿಗೆ ದಾಂಗುಡಿ ಇಡುತ್ತಾರೆ. ಮೀನಾ ಬಜಾರ್‌ನಲ್ಲಿ ಶನಿವಾರ ಒಂದು ಸುತ್ತು ಹಾಕಿದಾಗ ವ್ಯಾಪಾರದ ಅಬ್ಬರದ ದರ್ಶನವಾಯಿತು.

ಬೆಳಿಗ್ಗೆ 11 ಆಗುತ್ತಿರುವಂತೆಯೇ ಇಲ್ಲಿ ವ್ಯಾಪಾರ ಕಾವು ಪಡೆದುಕೊಳ್ಳುತ್ತದೆ. ರಾತ್ರಿಯವರೆಗೂ ವಹಿವಾಟು ನಡೆಸುವ ವ್ಯಾಪಾರಿಗಳು ಮರುದಿನ ಬೆಳಿಗ್ಗೆ 10–11ರ ವೇಳೆ ಎಲ್ಲ ವಸ್ತುಗಳನ್ನು ಚೊಕ್ಕವಾಗಿ ಜೋಡಿಸಿಟ್ಟು ವ್ಯಾಪಾರಕ್ಕೆ ಸಜ್ಜಾಗುವರು. ಹೊತ್ತೇರುತ್ತಿದ್ದಂತೆಯೇ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ಮಧ್ಯಾಹ್ನದ ಬಳಿಕ ಇಲ್ಲಿ ಕಾಲಿಡಲು ಜಾಗವಿರುವುದಿಲ್ಲ.

ಪುರುಷರಿಗೆ ಹತ್ತು ಹಲವು ಬಗೆಯ ಟೋಪಿ, ಸಲ್ವಾರ್‌ ಕಮೀಜ್, ಕುರ್ತಾ, ಪೈಜಾಮ ಇಲ್ಲಿ ಲಭ್ಯವಿದ್ದರೆ, ಮಹಿಳೆಯರು ಚೂಡಿದಾರ್‌, ಡ್ರೆಸ್‌ ಮೆಟೀರಿಯಲ್‌, ಸಿದ್ಧ ಉಡುಪು, ವ್ಯಾನಿಟಿ ಬ್ಯಾಗ್‌, ಪಾದರಕ್ಷೆ, ಬುರ್ಖಾ, ಸೌಂದರ್ಯವರ್ಧಕ ಸಾಧನಗಳ ಖರೀದಿಗೆ ಇಲ್ಲಿಗೆ ಬರುವರು. ಕೇವಲ ಮುಸ್ಲಿಮರು ಮಾತ್ರವಲ್ಲದೆ, ಇತರ ಧರ್ಮದವರೂ ಖರೀದಿಗೆ ಇಲ್ಲಿಗೆ ಬರುತ್ತಾರೆ.

ಮಕ್ಕಳ ಪಾದರಕ್ಷೆಗಳ ಮಾರಾಟದ 20ಕ್ಕೂ ಅಧಿಕ ಅಂಗಡಿಗಳು ಇಲ್ಲಿವೆ. ‘ಬೆಂಗಳೂರು ಮತ್ತು ಮುಂಬೈನಿಂದ ಪಾದರಕ್ಷೆಗಳನ್ನು ತಂದು ಮಾರಾಟ ಮಾಡುತ್ತೇನೆ. ರಂಜಾನ್‌ ತಿಂಗಳ ಕೊನೆಯ ಹತ್ತು ದಿನ ವ್ಯಾಪಾರ ನಾಲ್ಕೈದು ಪಟ್ಟು ಹೆಚ್ಚಾಗುತ್ತದೆ’ ಎಂದು ಪಾದರಕ್ಷೆ ವ್ಯಾಪಾರಿ ನಯಾಜ್‌ ಹೇಳಿದರು.

ಹೊಸ ಡಿಸೈನ್‌ಗಳಿಗೆ ಬೇಡಿಕೆ: ಮಹಿಳೆಯರು ಪ್ರತಿ ವರ್ಷ ಹೊಸ ಶೈಲಿಯ ಉಡುಪು ಮತ್ತು ಪಾದರಕ್ಷೆಗಳನ್ನು ಬಯಸುವರು. ಇದಕ್ಕಾಗಿ ನವೀನ ಮಾದರಿಯ, ಹೊಸ ಫ್ಯಾಷನ್‌ ಉಡುಪುಗಳನ್ನು ತಂದು ಮಾರಾಟ ಮಾಡುತ್ತೇವೆ ಎಂದು ಇಲ್ಲಿನ ವ್ಯಾಪಾರಿ ಅನ್ವರ್‌ ಹೇಳಿದರು. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಇಲ್ಲಿ ಖರೀದಿಗೆ ಬರುತ್ತಾರೆ.

ಫಿಕ್ಸ್‌ಡ್‌ ರೇಟ್‌: ಸಾಡೆ ರಸ್ತೆಯಲ್ಲಿರುವ ಕಾಯಂ ಮಳಿಗೆಗಳ ಜತೆ, ರಂಜಾನ್‌ ವೇಳೆ ನೂರಕ್ಕೂ ಅಧಿಕ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲಾಗುತ್ತದೆ. ಕೆಲವು ಕಾಯಂ ಮಳಿಗೆಯವರು ಅಂಗಡಿಯ ಒಳಗಿರುವ ವಸ್ತುಗಳನ್ನು ರಸ್ತೆ ಬದಿ ಇಟ್ಟು ಗ್ರಾಹಕರನ್ನು ಆಕರ್ಷಿಸುವರು.

ಬಹುತೇಕ ಅಂಗಡಿಗಳಲ್ಲಿ ‘ಫಿಕ್ಸ್‌ಡ್‌ ರೇಟ್‌’ ಎಂಬ ಬೋರ್ಡ್‌ ತೂಗುಹಾಕಲಾಗಿದೆ. ಗ್ರಾಹಕರು ಚೌಕಾಸಿ ಮಾಡಿ ಸಮಯ ವ್ಯರ್ಥವಾಗುವುದನ್ನು ತಡೆಯಲು ಈ ತಂತ್ರದ ಮೊರೆ ಹೋಗಿದ್ದಾರೆ. ‘ಚೌಕಾಸಿಗೆ ಅವಕಾಶವಿಲ್ಲ’ ಎಂದು ಕೆಲವು ವ್ಯಾಪಾರಿಗಳು ಕಡ್ಡಿ ಮುರಿದಂತೆ ಹೇಳಿಬಿಡುತ್ತಾರೆ. ಅಂತಹ ಅಂಗಡಿಯಲ್ಲಿ ಮನಸ್ಸಿಗೆ ಒಪ್ಪುವ ವಸ್ತುಗಳು ದೊರೆಯದಿದ್ದರೆ ಗ್ರಾಹಕರು ಮರುಮಾತನಾಡದೆ ಮುಂದಿನ ಅಂಗಡಿಗೆ ತೆರಳುವರು.

ನಗರದಲ್ಲಿ ಮಳೆಯಾಗುತ್ತಿರು ವುದರಿಂದ ವ್ಯಾಪಾರಕ್ಕೆ ಸ್ವಲ್ಪ ಹಿನ್ನಡೆ ಯಾಗಿದೆ ಎಂದು ಕೆಲವು ಅಂಗಡಿಗಳ ಮಾಲೀಕರು ಅಭಿಪ್ರಾಯಪಟ್ಟರು. ‘ಹಬ್ಬದ ಖರೀದಿಗೆ ಮೈಸೂರು ಮಾತ್ರ ವಲ್ಲದೆ, ದೂರದ ಊರುಗಳಿಂದಲೂ ಜನರು ಇಲ್ಲಿಗೆ ಬರುವರು. ಆದರೆ ಮಳೆಗೆ ಹೆದರಿ ದೂರದ ಊರುಗಳಿಂದ ಬರುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.