ADVERTISEMENT

ಸಾಹಿತಿ ಡಾ.ಸಿಪಿಕೆಗೆ 75ರ ಸಂಭ್ರಮ; ಸನ್ಮಾನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 8:52 IST
Last Updated 9 ಏಪ್ರಿಲ್ 2013, 8:52 IST

ಮೈಸೂರು: 75 ವಸಂತಗಳನ್ನು ಪೂರ್ಣಗೊಳಿಸಿರುವ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರನ್ನು ಚುಟುಕು ಸಾಹಿತ್ಯ ಪರಿಷತ್ ಹಾಗೂ ಕನ್ನಡ ವೈದ್ಯ ಸಾಹಿತ್ಯ ಪರಿಷತ್ ವತಿಯಿಂದ ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ವಿಶ್ರಾಂತ ಕುಲಪತಿ ಡಾ.ದೇ.ಜವರೇಗೌಡ ಸೋಮವಾರ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, `ಕೃಷ್ಣಕುಮಾರ್ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ದೊಡ್ಡ ಕವಿಯಾದ ಸಿಪಿಕೆ ವಿಮರ್ಶೆ ಹಾಗೂ ಭಾಷಾಂತರ ಕ್ಷೇತ್ರ ಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಇದುವರೆಗೆ 400ಕ್ಕೂ ಹೆಚ್ಚು ಕೃತಿಗಳು ಹಾಗೂ ಸಾವಿರಾರು ಚುಟುಕುಗಳನ್ನು ರಚಿಸಿದ್ದಾರೆ. ಅವರ ಎಲ್ಲ ಗ್ರಂಥಗಳು ಮೌಲಿಕವಾಗಿವೆ. ಇವರ ಚಂಚಲ ಚಿಂತಾಮಣಿ ಕೃತಿ ಪ್ರತಿಯೊಬ್ಬರೂ ಓದಲೇ ಬೇಕು. ಈ ಗ್ರಂಥ ಜ್ಞಾನದ ಗಣಿಯಾಗಿದೆ' ಎಂದರು.

ಸಾಹಿತಿ ಪ್ರೊ.ಎ.ಎಸ್.ಜಯರಾಂ ಮಾತನಾಡಿ, `ಇತ್ತೀಚಿನ ದಿನಗಳಲ್ಲಿ ಹೆಚ್ಚು ಪುಸ್ತಕಗಳು ಬಿಡುಗಡೆ ಆಗುತ್ತಿವೆ. ಆದರೆ, ಅನೇಕ ಲೇಖಕರನ್ನು ಅವರ ಗುಣ ವಿಶೇಷದಿಂದಲೇ ಹೊಗಳುತ್ತಿರುವುದು ಸರಿಯಲ್ಲ. ಸಿಪಿಕೆ ಅವರು ಇದುವರೆಗೂ ಬಹಳಷ್ಟು ಕೃತಿಗಳನ್ನು ರಚಿಸಿದ್ದಾರೆ. ಆದರೆ, ಅವುಗಳಲ್ಲಿ ನಮಗೆ ಬೇಕಾದವುಗಳನ್ನು ಹುಡುಕಲು ಸಾಧ್ಯವಿಲ್ಲ. ಹೀಗಾಗಿ ಇವುಗಳನ್ನು ಸಂಗ್ರಹಿಸಿದಾಗ ಮಾತ್ರ ಸಿಪಿಕೆ ಅವರ ಕೃತಿಗಳು ಒಂದೆಡೆ ಲಭ್ಯವಾಗಲು ಸಾಧ್ಯ. ಸಿಪಿಕೆ ಅವರು ಯಾವುದೇ ಅಳುಕಿಲ್ಲದೆ ಹೆಣ್ಣಿನ ಬಗ್ಗೆ ಬರೆಯುತ್ತಾರೆ. ಮಾದಕ ವಸ್ತುಗಳಿಗೆ ಹೆಣ್ಣನ್ನು ಹೋಲಿಕೆ ಮಾಡುತ್ತಾರೆ. ಬುದ್ಧಿವಂತಿಕೆ ಎಂಬುದು ಗಂಡಿನ ಸ್ವತ್ತಾದರೆ, ಶೀಲ ಮತ್ತು ಚಿನ್ನದ ಬಗೆಗಿನ ವ್ಯಾಮೋಹ ಹೆಣ್ಣಿನ ಸ್ವತ್ತು ಎಂಬ ಧೋರಣೆ ಇವರ ಕೃತಿಗಳಲ್ಲಿ ಕಾಣಸಿಗುತ್ತದೆ' ಎಂದರು.

ರಂಗಕರ್ಮಿ ಎ.ಎನ್.ರಮೇಶ್ ಗುಬ್ಬಿ ಹೊರತಂದಿರುವ `ಚುಟುಕು ಚಿತ್ತಾರ' ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಶರತ್‌ಕುಮಾರ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ. ಅಕಬರ ಅಲಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಉಪಸ್ಥಿತ ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.