ಮೈಸೂರು: ಇಲ್ಲಿನ ಅರಮನೆಯ ರತ್ನ ಸಿಂಹಾಸನ ಮತ್ತು ಚಿನ್ನದ ಅಂಬಾರಿ ಕಾನೂನಾತ್ಮಕವಾಗಿ ಯಾರ ಒಡೆತನಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೋರಿ ಇತಿಹಾಸ ಲೇಖಕ ಡಾ.ಪಿ.ವಿ. ನಂಜರಾಜ ಅರಸು ಅವರು ಜಿಲ್ಲಾ ಉಸ್ತುವಾರಿ ಸಚಿವ
ವಿ. ಶ್ರೀನಿವಾಸಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಸಚಿವರಿಗೆ ಸೆ. 22ರಂದು ಬರೆದಿರುವ ಪತ್ರದ ಪ್ರತಿಯನ್ನು ‘ಪ್ರಜಾವಾಣಿ’ಗೆ ನೀಡಿದ್ದಾರೆ. ಪತ್ರದಲ್ಲಿನ ವಿವರಣೆ ಇಂತಿದೆ. ಮಹಾರಾಜ ಜಯಚಾಮರಾಜ ಒಡೆಯರ್ ಅವರು 1974 ಸೆ. 23ರಂದು ನಿಧನರಾದ ನಂತರ ಅವರ ಉತ್ತರಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಸಾಂಸ್ಕೃತಿಕ ಕಲಾಸಂಪತ್ತಿರುವ ಐತಿಹಾಸಿಕ ಅರಮನೆ ನಿರ್ವಹಣೆ ಮತ್ತು ಸಾಧನಗಳ ಕೊರತೆಯಿಂದ ಕಷ್ಟವಾಗಿದೆ. ಆದ್ದರಿಂದ ಅರಮನೆಯಲ್ಲಿ ವಾಸ ಇರುವ ಭಾಗವನ್ನು ಬಿಟ್ಟು ಉಳಿದ ಭಾಗದ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾರೆ.
ಕರ್ನಾಟಕ ಸರ್ಕಾರವು 1976ಫೆ. 26ರಂದು ಆದೇಶ ಹೊರಡಿಸಿ ರಾಜವಂಶಸ್ಥರು ವಾಸವಿದ್ದ ಭಾಗವನ್ನು ಬಿಟ್ಟು ಅರಮನೆಯ ಉಳಿದ ಭಾಗವನ್ನು ಅಲ್ಲಿಯ ಚರಾಸ್ತಿ ಸಮೇತ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಸರ್ಕಾರದ ಈ ಆದೇಶವನ್ನು ಚಾಮರಾಜ ಒಡೆಯರ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 1997 ನ. 6ರಂದು ಶ್ರೀಕಂಠದತ್ತರ ಮನವಿಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. 1998 ಏ. 21ರಂದು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ತಿಂಗಳೊಳಗೆ ಅರಮನೆಯ ಭಾಗವನ್ನು ರಾಜವಂಶಸ್ಥರಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿತ್ತು.
ಆದರೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸುವುದಿಲ್ಲ. ಬದಲಾಗಿ ಮೈಸೂರು ಅರಮನೆಯ ಐತಿಹಾಸಿಕ ರತ್ನಸಿಂಹಾಸನ, ಚಿನ್ನದ ಅಂಬಾರಿ, ಕಿರೀಟ ಮೊದಲಾದ ಅಮೂಲ್ಯ ವಸ್ತಗಳನ್ನು ಸಂರಕ್ಷಿಸುವ ಉದ್ದೇಶದಿಂದ ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ– 1998ರ ಕರ್ನಾಟಕ ಅಧಿನಿಯಮ ಸಂಖ್ಯೆ 32 ಅನ್ನು ಜಾರಿಗೊಳಿಸುತ್ತದೆ. ಈ ಅಧಿನಿಯಮದ ಪರಿಚ್ಛೇದ 2 ಉಪಾಂಗ 10ರ ಪ್ರಕಾರ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಮತ್ತು ಅವರ ಪತ್ನಿ ಜೀವಂತ ಇರುವ ತನಕ ಅವರು ವಾಸ್ತವ್ಯ ಇರುವ ಅರಮನೆ ಭಾಗದಲ್ಲಿ ವಾಸ ಇರಬಹುದು. ಕೋಟೆಯೊಳಗೆ ಇರುವ ಮನುಷ್ಯರನ್ನು ಹೊರತುಪಡಿಸಿ ಉಳಿದ ಎಲ್ಲವೂ ಸರ್ಕಾರದ ವಶವಾಗುತ್ತದೆ ಎಂಬ ಸ್ಥೂಲ ವಿವರಣೆಯನ್ನು ಅಧಿನಿಯಮ ಒಳಗೊಂಡಿದೆ. ಈ ಅಧಿನಿಯಮವನ್ನು ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಮೊಕದ್ದಮೆ ಇನ್ನೂ ಇತ್ಯರ್ಥವಾಗಿಲ್ಲ.
ಇತ್ಯರ್ಥವಾಗುವವರೆಗೆ ಅಧಿನಿಯಮ 32 ಜಾರಿಯಲ್ಲಿ ಇರುತ್ತದೆ.
ಅಧಿನಿಯಮ 32ರ ಪ್ರಕಾರ ರತ್ನ ಸಿಂಹಾಸನ, ಅಂಬಾರಿ, ಕಿರೀಟ ಇವೆಲ್ಲವೂ ಸರ್ಕಾರದ ಸ್ವಾಧೀನಕ್ಕೆ ಬರುತ್ತವೆ. ಆದರೆ, ವಾಸ್ತವದಲ್ಲಿ ಸಿಂಹಾಸನ ಮತ್ತು ಅಂಬಾರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ವಶದಲ್ಲಿದ್ದು ಪ್ರಸ್ತುತ ಪ್ರಮೋದಾದೇವಿ ಒಡೆಯರ್ ವಶದಲ್ಲಿವೆ. ರತ್ನ ಸಿಂಹಾಸನ ಇರುವುದು ಮುಖ್ಯ ದರ್ಬಾರ್ ಹಾಲ್‌ನ ಭದ್ರಕೋಣೆಯಲ್ಲಿ. ಚಿನ್ನದ ಅಂಬಾರಿ ಇರುವುದು ಗೊಂಬೆತೊಟ್ಟಿಯಲ್ಲಿ.
ಭದ್ರಕೋಣೆಯ ಕೀಲಿಕೈಗಳನ್ನು ಸರ್ಕಾರದ ವಶದಿಂದ ಅರಮನೆಯೊಳಕ್ಕೆ ಜಾರಿಸಿದ ಅಧಿಕಾರಿಗಳು ಯಾರು? ದಸರಾ ಮುಗಿದ ತಕ್ಷಣ ಸಿಂಹಾಸನ ಮತ್ತು ಅಂಬಾರಿ ಭದ್ರಕೋಣೆಯನ್ನು ಸೇರುತ್ತವೆ. ಭದ್ರಕೋಣೆಯ ಕೀಲಿಕೈಗಳು ಯಾರ ಬಳಿ ಇರುತ್ತವೆ ಎಂಬುದು ಅವುಗಳ ಒಡೆತನವನ್ನು ನಿರ್ಧರಿಸುತ್ತದೆ. ಸದ್ಯಕ್ಕೆ ಹೈಕೋರ್ಟ್ ತೀರ್ಪು ಬರುವವರೆಗೆ ಕಾನೂನಾತ್ಮಕವಾಗಿ ಯಾರು ಇವುಗಳ ಒಡೆಯರು? ಸರ್ಕಾರವೋ ಅಥವಾ ಪ್ರಮೋದಾದೇವಿ ಅವರೋ ಎಂಬುದನ್ನು ಜಿಲ್ಲಾ ಉಸ್ತುವಾರಿ ಸ್ಪಷ್ಟಪಡಿಸಬೇಕು ಅವರು ಪತ್ರದಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.