ADVERTISEMENT

ಸಿ.ಎಂ, ಎಚ್‌ಡಿಕೆ ಭರದ ಪ್ರಚಾರ

ಪ್ರತಿಷ್ಠೆಯ ಕಣವಾದ ಚಾಮುಂಡೇಶ್ವರಿ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 10:25 IST
Last Updated 17 ಏಪ್ರಿಲ್ 2018, 10:25 IST

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಭರ್ಜರಿ ಪ್ರಚಾರ ನಡೆಸಿದರು.

ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಎರಡು ದಿನಗಳಿಂದ ಮತ ಯಾಚನೆ ಮಾಡುತ್ತಿರುವ ಕುಮಾರಸ್ವಾಮಿ, ಮೂರನೇ ದಿನವೂ ರೋಡ್‌ ಷೋ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹತ್ತು ವರ್ಷಗಳ ಬಳಿಕ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರಳಿರುವ ಸಿದ್ದರಾಮಯ್ಯ ಮೂರನೇ ಹಂತದ ಪ್ರಚಾರ ಆರಂಭಿಸಿದರು.

ಕತ್ತಿ ತಿರುಗಿಸಿದ ಸಿದ್ದರಾಮಯ್ಯ: ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ಲಿಂಗಾಂಬುಧಿ ಪಾಳ್ಯದ ಸಿದ್ಧಪ್ಪಾಜಿ, ರಾಮಮಂದಿರ, ಮಂಟೇಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದರು. ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು, ಕತ್ತಿಯನ್ನು ಕೊಡುಗೆ ನೀಡಿದರು. ವೀರಗಾಸೆ ಕುಣಿತದ ರೀತಿಯಲ್ಲಿ ಕತ್ತಿ ತಿರುಗಿಸಿದ ಸಿದ್ದರಾಮಯ್ಯ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

ADVERTISEMENT

ಐದು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಮೊದಲ ದಿನವೇ 18 ಹಳ್ಳಿಗಳನ್ನು ಸುತ್ತಿದರು. ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತ ಯಾಚಿಸಿದರು. ಪ್ರತಿ ಗ್ರಾಮದಲ್ಲಿಯೂ ದೇಗುಲಗಳಿಗೆ ಭೇಟಿ ನೀಡಿ ಮಂಗಳಾರತಿ ಪಡೆದರು. ಅಲ್ಲಲ್ಲಿ ವಾಹನದಿಂದ ಕೆಳಗೆ ಇಳಿದು ಓಣಿಗಳಲ್ಲಿ ಹೆಜ್ಜೆ ಹಾಕಿದರು.

ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸಹ ಇಂದು ಅವರ ಜತೆ ಪ್ರಚಾರದಲ್ಲಿ ತೊಡಗಿಸಿಕೊಂಡರು.

20ರಂದು ನಾಮಪತ್ರ: ಲಿಂಗಾಂಬುಧಿ ಪಾಳ್ಯದಲ್ಲಿ ನಡೆದ ಭೋವಿ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡರು. ‘2006ರ ಉಪಚುನಾವಣೆಯ ಬಳಿಕ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರಳಿದ್ದೇನೆ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ’ ಎಂದು ಪ್ರಶ್ನಿಸಿದರು. ಕಾರ್ಯಕರ್ತರು ಕೈ ಮೇಲೆತ್ತಿ ಬೆಂಬಲ ಸೂಚಿಸಿದ ಬಳಿಕ ಮಾತು ಮುಂದುವರಿಸಿದರು. ‘ಏ.20ಕ್ಕೆ ನಾಮಪತ್ರ ಸಲ್ಲಿಸುತ್ತಿದ್ದೇನೆ’ ಎಂದು ಘೋಷಿಸಿದರು.

‘ಈವರೆಗೂ ಶಾಸಕನಾಗುವ ಬಯಕೆಯಿಂದ ನಿಮ್ಮೆದುರು ಬರುತ್ತಿದ್ದೆ. ಐದು ಬಾರಿ ಆಶೀರ್ವದಿಸಿದ ಪರಿಣಾಮ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ’ ಎಂದು ಎಲ್ಲೆಡೆ ಮತ ಯಾಚನೆ ಮಾಡಿದರು.

70ಕ್ಕೂ ಹೆಚ್ಚು ಗ್ರಾಮ ಸುತ್ತಿದರು: ಮೂರು ದಿನಗಳಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ಎಚ್‌.ಡಿ.ಕುಮಾರ ಸ್ವಾಮಿ, ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರೊಂದಿಗೆ ಸುಮಾರು 70 ಗ್ರಾಮಗಳನ್ನು ಸುತ್ತಿದರು. ವಿಶೇಷ ವಿನ್ಯಾಸದ ಬಸ್‌ನಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಪ್ರಚಾರ ನಡೆಸಿದರು. ಹೂವಿನಹಾರ ಹಾಕುವ ಮೂಲಕ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಕೈಬೀಸುತ್ತ, ಕೈಮುಗಿದು ನಗುಮೊಗ ತೋರುತ್ತಲೇ ವಾಹನದಲ್ಲಿ ಸಂಚರಿಸಿ ಪ್ರಚಾರ ನಡೆಸಿದರು.

ಮೈಸೂರು: ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್‌, ಕೋಮುವಾದಿ ಶಕ್ತಿಗಳ ಬೆಂಬಲ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ‘ರಾಜ್ಯದಲ್ಲಿ ಒಂದು ಸ್ಥಾನ ಕೂಡ ಗೆಲ್ಲುವ ಶಕ್ತಿ ಒವೈಸಿ ಅವರ ಪಕ್ಷಕ್ಕೆ ಇಲ್ಲ. ಈ ಬೆಂಬಲದಿಂದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶಕ್ತಿ ಕುಂದಿರುವ ಜೆಡಿಎಸ್, ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ’ ಎಂದು ಲೇವಡಿ ಮಾಡಿದರು.

**

ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಲ್ಲಿನ ಜನರು ಕೋರಿಕೊಂಡಿದ್ದರು. ಆದರೆ, ಅಲ್ಲಿ ಕಣಕ್ಕೆ ಇಳಿಯುತ್ತೇನೆ ಎಂದು ನಾನು ಎಂದೂ ಹೇಳಿರಲಿಲ್ಲ – ಸಿದ್ದರಾಮಯ್ಯ ,ಮುಖ್ಯಮಂತ್ರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.