ADVERTISEMENT

ಸೃಜನಶೀಲ ಕೃತಿಗಿಂತ ಗದ್ಯಕ್ಕೇ ಬೇಡಿಕೆ

ಕೃತಿಯನ್ನು ವಿಮರ್ಶಕ ಡಾ.ನಟರಾಜ್‌ ಹುಳಿಯಾರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 10:02 IST
Last Updated 9 ಜೂನ್ 2014, 10:02 IST
ಮೈಸೂರಿನ ಗಾಂಧಿ ಭವನದಲ್ಲಿ ನಿರಂತರ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹರಿಪ್ರಸಾದ್‌ ಅವರ  ‘ರಾಮಂದ್ರ’ ಕೃತಿಯನ್ನು ವಿಮರ್ಶಕ ಡಾ.ನಟರಾಜ್‌ ಹುಳಿಯಾರ್‌ ಬಿಡುಗಡೆ ಮಾಡಿದರು. ಸಾಹಿತಿ ಮಂಜುನಾಥ ಲತಾ, ಕತೆಗಾರ ಅಬ್ದುಲ್‌ ರಶೀದ್‌, ಪ್ರಸಾದ್‌ ಕುಂದೂರು ಇದ್ದಾರೆ.
ಮೈಸೂರಿನ ಗಾಂಧಿ ಭವನದಲ್ಲಿ ನಿರಂತರ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹರಿಪ್ರಸಾದ್‌ ಅವರ ‘ರಾಮಂದ್ರ’ ಕೃತಿಯನ್ನು ವಿಮರ್ಶಕ ಡಾ.ನಟರಾಜ್‌ ಹುಳಿಯಾರ್‌ ಬಿಡುಗಡೆ ಮಾಡಿದರು. ಸಾಹಿತಿ ಮಂಜುನಾಥ ಲತಾ, ಕತೆಗಾರ ಅಬ್ದುಲ್‌ ರಶೀದ್‌, ಪ್ರಸಾದ್‌ ಕುಂದೂರು ಇದ್ದಾರೆ.   

ಮೈಸೂರು: ಚಿಂತನೆಗಳನ್ನು ಅಭ್ಯಸಿಸುವ ಓದುಗರ ಹಸಿವು ಇತ್ತೀಚೆಗೆ ಹೆಚ್ಚಾಗಿದ್ದು, ಸೃಜನಶೀಲ ಕೃತಿಗಿಂತ ಗದ್ಯಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ ಎಂದು ವಿಮರ್ಶಕ ಡಾ.ನಟರಾಜ್‌ ಹುಳಿಯಾರ್‌ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ನಿರಂತರ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹರಿಪ್ರಸಾದ್‌ ಅವರ ಪ್ರಬಂಧಗಳ ಸಂಕಲನ ‘ರಾಮಂದ್ರ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಹಿತ್ಯದ ಇತರ ಪ್ರಕಾರಗಳಿಗಿಂತ ಗದ್ಯಕ್ಕೆ ಹೆಚ್ಚು ಮಹತ್ವ ಬಂದಿದೆ. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌. ಅಂಬೇಡ್ಕರ್‌, ರಾಮಮನೋಹರ ಲೋಹಿಯಾ ಅವರು ತಮ್ಮ ಸಾಮಾಜಿಕ, ಸಾಂಸ್ಕೃತಿಕ ನೋಟವನ್ನು ಗದ್ಯದ ಮೂಲಕ ರವಾನಿಸಿದರು. ಮತೀಯವಾದಿ ಶಕ್ತಿಗಳು ಹೊಸ ಕಥೆಗಳನ್ನು ಸೃಷ್ಟಿಸಿದ್ದು ಇದೇ ಗದ್ಯದಿಂದಲೇ. ವೈದಿಕ ಶಕ್ತಿಗಳನ್ನು ದಲಿತ ಚಿಂತನೆ ಹಿಮ್ಮೆಟ್ಟಿಸಲು ಇದೇ ಪ್ರಕಾರವನ್ನು ಅವಲಂಬಿಸಿತು. ಆದರೆ, ಪದ, ಅಕ್ಷರಗಳ ಹಿಂದೆ ಅಡಗಿಕೊಳ್ಳುವ ಶಕ್ತಿ ಇದಕ್ಕೆ ಇಲ್ಲ. ಹೆಚ್ಚು ಪಾರದರ್ಶಕವಾಗಿರುವ ಗದ್ಯದ ಕುರಿತು ಲೇಖಕರಿಗೆ ಎಚ್ಚರಿಕೆ ಅಗತ್ಯ ಎಂದು ಸಲಹೆ ನೀಡಿದರು.

ದೃಶ್ಯ ಮಾಧ್ಯಮದ ಪ್ರಭಾವದಿಂದಾಗಿ ‘ವಾದ’ ಗದ್ಯದ ಸವಾಲು ಸಾರ್ವಜನಿಕವಾಗಿ ಎದುರಾಗಿದೆ. ಭಾಷೆಯನ್ನು ಮಾರುಕಟ್ಟೆಯ ಸರಕಾಗಿ ಪರಿಗಣಿಸಿದರ ಫಲವಾಗಿ ಸೃಷ್ಟಿಯಾದ ಸಮಸ್ಯೆ ಇದು. ವಾಚಾಳಿ ಮಧ್ಯಮ ವರ್ಗ ಮಾಧ್ಯಮದಲ್ಲೂ ಅಭಿಪ್ರಾಯ ರೂಪಿಸುತ್ತಿದೆ. ಹೀಗಾಗಿ, ಲೇಖಕರಿಗೆ ಮಾತ್ರ ಹೆಚ್ಚು ಸ್ವಾತಂತ್ರ್ಯವಿದೆ. ಇನ್ನೊಂದು ಬಗೆಯ ಚಿಂತನಾಕ್ರಮವಾಗಿರುವ ಬರಹ ಮತ್ತು ಮಾತನ್ನು ನಿರಂತರ ಪರೀಕ್ಷೆಗೆ ಒಳಪಡಿಸಬೇಕು. ಪ್ರಜ್ಞಾಪೂರ್ವಕ ಪ್ರವಾಹವನ್ನು ಹರಿಬಿಡುವಾಗ ಚೌಕಟ್ಟಿಗೆ ಒಳಪಡಿಸುವುದು ಸೂಕ್ತ ಎಂದು ಪ್ರತಿಪಾದಿಸಿದರು.

ಸಮೂಹದ ಭಾಗವಾಗಿದ್ದ ‘ರಾಮಂದ್ರ’ನನ್ನು ಕೋಮುವಾದಿ ಶಕ್ತಿಗಳು ‘ರಾಮಮಂದಿರ’ದ ಹೆಸರಲ್ಲಿ ರಾಜಕೀಯ ಮಾಡಲು ಮತ್ತೆ ಮೇಲೆದ್ದಿವೆ. ರಾಮಮಂದಿರ ಮತ್ತು ಅಯೋಧ್ಯೆಯ ವಿವಾದವನ್ನು ಬಗೆಹರಿಸದೇ ನಿರಂತರವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ, ಎಲ್ಲ ತಲೆಮಾರುಗಳು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ಹೇಳಿದರು.

ಕತೆಗಾರ ಅಬ್ದುಲ್‌ ರಶೀದ್‌, ಸಾಹಿತಿ ಮಂಜುನಾಥ ಲತಾ, ಲೇಖಕ ಹರಿಪ್ರಸಾದ್‌, ನಿರಂತರ ಪ್ರಕಾಶನದ ಪ್ರಸಾದ್‌ ಕುಂದೂರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.