ADVERTISEMENT

ಸ್ಪರ್ಧಾ ಕಣದಲ್ಲಿ 147 ಅಭ್ಯರ್ಥಿಗಳು

ನಾಮಪತ್ರ ಹಿಂಪಡೆದ 36 ಉಮೇದುವಾರರು–ವರುಣಾದಲ್ಲಿ ಅತ್ಯಧಿಕ ಸ್ಪರ್ಧಿಗಳು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:59 IST
Last Updated 28 ಏಪ್ರಿಲ್ 2018, 12:59 IST

ಮೈಸೂರು: ವಿಧಾನಸಭಾ ಚುನಾವಣೆ ಕಾವೇರುತ್ತಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿ ಒಟ್ಟು 147 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಉಮೇದುವಾರಿಕೆ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿದ್ದರಿಂದ ಆಯಾಯ ಕ್ಷೇತ್ರಗಳ ಚುನಾವಣಾ
ಧಿಕಾರಿ ಕಚೇರಿಗಳಲ್ಲಿ ಬಿರುಸಿನ ಪ್ರಕ್ರಿಯೆಗಳು ನಡೆದವು. 36 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದರು.

ಪ್ರಮುಖರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ 9 ಅಭ್ಯರ್ಥಿಗಳು ಹಾಗೂ ವರುಣಾ ಕ್ಷೇತ್ರದಿಂದ 12 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ.

ADVERTISEMENT

ಒಟ್ಟು 196 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 183 ನಾಮಪತ್ರಗಳು ಸಿಂಧುವಾಗಿದ್ದವು.
13 ನಾಮಪತ್ರಗಳನ್ನು ತಿರಸ್ಕರಿಸಲಾಗಿತ್ತು.

ಕೆ.ಆರ್‌.ನಗರ, ನಂಜನಗೂಡು ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆದಿಲ್ಲ. ಮೇ 12ರಂದು ಮತದಾನ ನಡೆಯಲಿದ್ದು, 15ರಂದು ಮತ ಎಣಿಕೆ ನಡೆಯಲಿದೆ.

ವರುಣಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. ಚಾಮುಂಡೇಶ್ವರಿ, ನರಸಿಂಹರಾಜ ಹಾಗೂ ಹುಣಸೂರು ಅಖಾಡದಲ್ಲಿ 15 ಉಮೇದುವಾರರು ಇದ್ದಾರೆ. ಎಚ್‌.ಡಿ.ಕೋಟೆಯಲ್ಲಿ ಅತಿ ಕಡಿಮೆ ಅಂದರೆ ಏಳು ಸ್ಪರ್ಧಿಗಳು ಇದ್ದಾರೆ.

ಶಮನವಾಗದ ಭಿನ್ನಮತ

ಮೈಸೂರು: ಟಿಕೆಟ್‌ ಸಿಗದ ಅಸಮಾಧಾನದಿಂದ ಹಲವು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಬಂಡಾಯ ಅಭ್ಯರ್ಥಿಗಳ ಸಿಟ್ಟನ್ನು ಶಮನಗೊಳಿಸಲು ಮುಖಂಡರಿಗೆ ಸಾಧ್ಯವಾಗಿಲ್ಲ.

ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಹರೀಶ್‌ ಗೌಡ ಅವರ ಮನವೊಲಿಸಲು ಕೊನೆಗಳಿಗೆಯವರಿಗೆ ಪ್ರಯತ್ನಿಸಲಾಗಿದೆ. ಆದರೆ, ಅವರು ಜಗ್ಗಿಲ್ಲ. ಈ ಕ್ಷೇತ್ರದಿಂದ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿ ಪ್ರೊ.ಕೆ.ಎಸ್‌.ರಂಗಪ್ಪ ಕಣಕ್ಕಿಳಿದಿದ್ದಾರೆ.

ಚಾಮರಾಜ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ಜಯಪ್ರಕಾಶ್ ಅವರ ಮನವೊಲಿಸುವಲ್ಲಿ ಹಿರಿಯ ಮುಖಂಡರು ಯಶಸ್ವಿಯಾಗಿದ್ದಾರೆ.

ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಚ್.ವಿ.ಕೃಷ್ಣಸ್ವಾಮಿ ಶುಕ್ರವಾರ ತಮ್ಮ ಉಮೇದುವಾರಿಕೆ ಹಿಂಪಡೆದರು.

ಕೆ.ಆರ್‌.ನಗರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೊಸಹಳ್ಳಿ ವೆಂಕಟೇಶ್ ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಬಿಜೆಪಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿದ್ದ ಬಿ.ಎಂ.ನಟರಾಜ್ ಅವರು ನರಸಿಂಹರಾಜ ಕ್ಷೇತ್ರದಿಂದ ಸಮಾಜವಾದಿ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.