ADVERTISEMENT

ಸ್ಮಶಾನ ಒತ್ತುವರಿ ತೆರವುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 8:47 IST
Last Updated 27 ಅಕ್ಟೋಬರ್ 2017, 8:47 IST

ಮೈಸೂರು: ಸ್ಮಶಾನ ಒತ್ತುವರಿ ತೆರವುಗೊಳಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ದವರಿಗೆ ಸಚಿವ ತನ್ವೀರ್ ಸೇಠ್ ಮತ ದಾರರಿಗೆ ಮುಖ ತೋರಿಸಬಾರದು ಎಂದು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ಮೈಸೂರು ಸಿಟಿ ಮುಸ್ಲಿಂ ಫೋರಂ ವತಿಯಿಂದ ಇಲ್ಲಿ ಗುರುವಾರ ಏರ್ಪಡಿಸಿದ್ದ ಮುಸ್ಲಿಂ ಸಮಾವೇಶದಲ್ಲಿ ಅವರು ಮಾತನಾಡಿದರು.

ನಗರದ ಕೆ.ಆರ್.ಮೊಹಲ್ಲಾದ ರಾಮಾನುಜ ಹಾಗೂ ಬಸವೇಶ್ವರ ರಸ್ತೆ ಮತ್ತು ಶ್ರೀರಂಗಪಟ್ಟಣದಲ್ಲಿರುವ ಮುಸ್ಲಿಮರ ಸ್ಮಶಾನಗಳು ಒತ್ತುವರಿಗೆ ಒಳಗಾಗಿವೆ. ಇವುಗಳನ್ನು ತೆರವುಗೊಳಿಸದೆ ಮತ್ತೆ ಮತ ಕೇಳಲು ಬರಲೇಬೇಡಿ ಎಂದು ಅವರು ಹೇಳಿದರು.

ಉದಯಗಿರಿ, ಕ್ಯಾತಮಾರನಹಳ್ಳಿ ಯಲ್ಲಿರುವ ಮಕ್ಕಳ ಪಾಠಶಾಲೆಯಾದ ಮದರಸಾಕ್ಕೆ ದಾಖಲೆ, ಪರವಾನಗಿ ಇದ್ದರೂ ವಿನಾಕಾರಣ ಪೊಲೀಸರು ಮದರಸವನ್ನು ನಿಲ್ಲಿಸಿದ್ದಾರೆ. ಕೂಡಲೇ ಬೀಗವನ್ನು ತೆರವುಗೊಳಿಸಿ ಇಲ್ಲಿ ಮಕ್ಕಳು ಕಲಿಯುವಂತೆ ಆಗಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಟಿಪ್ಪುವಿನ ಕುರಿತು ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದರು ಎಂದು ಟಿಪ್ಪುವಿನ ವ್ಯಕ್ತಿತ್ವಕ್ಕೆ ಧಕ್ಕೆಯಾಗದು. 1749ರಲ್ಲೇ ಕಾವೇರಿ ನದಿಗೆ ಅಡ್ಡವಾಗಿ ಟಿಪ್ಪು ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣಕ್ಕೆ ಮೊದಲು ಶಂಕುಸ್ಥಾಪನೆ ಮಾಡಿದ್ದ ಎಂಬುದಕ್ಕೆ ಈಗಲೂ ಅಲ್ಲಿ ಪಾರ್ಸಿ ಭಾಷೆಯಲ್ಲಿ ಅಡಿಗಲ್ಲು ಇದೆ. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ಆಭರಣಗಳನ್ನು ನೀಡುವ ಮೂಲಕ ಧಾರ್ಮಿಕ ಸಹಿಷ್ಣುತೆಯನ್ನು ಮೆರೆದಿದ್ದ ಎಂದು ಅವರು ಶ್ಲಾಘಿಸಿದರು.

‘ಮುಸ್ಲಿಮರಿಗೆ ನರೇಂದ್ರ ಮೋದಿ ಅಥವಾ ಬಿಜೆಪಿ ಭಯ ಇಲ್ಲ. ದೇಶ ಉಳಿಯಬೇಕು ಎಂಬುದಷ್ಟೇ ನಮ್ಮ ಗುರಿ. ನಾವು ಈ ದೇಶವನ್ನು ಪ್ರೀತಿಸುತ್ತೇವೆ. ಇಲ್ಲಿಯೇ ಉಳಿಯುತ್ತೇವೆ. ಹಿಂದೂ, ಮುಸ್ಲಿಮರು ಒಂದಾಗಿ ದೇಶ ಉಳಿಸಿಕೊಳ್ಳಲು ಹೋರಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಎಂ.ಕೆ.ಸೋಮಶೇಖರ್, ರಿಜ್ವಾನ್ ಹರ್ಷದ್, ಪಾಲಿಕೆ ಸದಸ್ಯ ಅಯೂಬ್‌ ಖಾನ್, ಮುಖಂಡರಾದ ಆರಿಫ್ ಹುಸೇನ್, ದೇವರಾಜ, ಎಸ್‌ಡಿಪಿಐನ ಎ.ಎಸ್.ಕಲೀಂ, ಪಿಎಫ್‌ನ ಅಮೀನ್‌ ಸೇಠ್ ಇತರರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.