ADVERTISEMENT

ಸ್ವಾಮೀಜಿ ಆಗದೆಯೂ ಲೋಕಕಲ್ಯಾಣ ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 9:19 IST
Last Updated 23 ಅಕ್ಟೋಬರ್ 2017, 9:19 IST
ಸ್ವಾಮೀಜಿ ಆಗದೆಯೂ ಲೋಕಕಲ್ಯಾಣ ಸಾಧ್ಯ
ಸ್ವಾಮೀಜಿ ಆಗದೆಯೂ ಲೋಕಕಲ್ಯಾಣ ಸಾಧ್ಯ   

ಮೈಸೂರು: ‘ಮಲೆಯೂರು ಗುರುಸ್ವಾಮಿ ಅವರು ಮನಸ್ಸು ಮಾಡಿದ್ದರೆ ಒಂದು ಮಠದ ಸ್ವಾಮೀಜಿ ಆಗಬಹುದಿತ್ತು. ಸ್ವಾಮೀಜಿ ಆಗುವ ಅವಕಾಶ ನನಗೂ ಒಲಿದು ಬಂದಿತ್ತು. ಆ ಅವಕಾಶ ತಿರಸ್ಕರಿಸಿದೆ. ಸ್ವಾಮೀಜಿ ಆಗಿದ್ದರೆ ಏನು ಅನಾಹುತ ಸಂಭವಿಸುತಿತ್ತು ಎಂಬುದು ನನಗೆ ಗೊತ್ತಿಲ್ಲ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ತಿಳಿಸಿದರು.‌

ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರ ‘ಮಗು–70’ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸ್ವಾಮೀಜಿ ಆಗದೆಯೂ ಲೋಕಕಲ್ಯಾಣ ಮಾಡಬಹುದು. ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಬದಲಾವಣೆಗೆ ಮುಂದಾದರು’ ಎಂದರು.

ADVERTISEMENT

‘ಮಾನವೀಯ ಗುಣ ಇರುವ ಎಲ್ಲರೂ ಬುದ್ಧ, ಬಸವ, ಅಂಬೇಡ್ಕರ್‌ ಪರಂಪರೆಗೆ ಸೇರಿದವರು. ಬದುಕಿನಲ್ಲಿ ಬದಲಾವಣೆ, ಚಲನಶೀಲತೆ ಬಯಸುವ ಪ್ರತಿಯೊಬ್ಬರೂ ಪ್ರಗತಿಪರರು ಹಾಗೂ ಎಡಪಂಥೀಯರು. ಬದಲಾವಣೆ ಬಯಸದವರು ಬಲಪಂಥೀಯರು’ ಎಂದು ವಿಶ್ಲೇಷಿಸಿದರು.

‘ವಯಸ್ಸು ಮುಖ್ಯವಲ್ಲ; ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ. ಸಕ್ರಿಯ ಮನೋಭಾವದ ಗುರುಸ್ವಾಮಿ ಅವರನ್ನು ಕೆಲವರು ಮಧ್ಯಮ ಪಂಥೀಯರು ಎನ್ನುತ್ತಾರೆ. ಆದರೆ, ನನ್ನ ಪ್ರಕಾರ ಗುರುಸ್ವಾಮಿ ಕೂಡ ಎಡಪಂಥೀಯರು’ ಎಂದು ಹೇಳಿದರು.

ಶಾಸಕ ವಾಸು ಮಾತನಾಡಿ, ‘ಗುರುಸ್ವಾಮಿ ಅವರು ಲೋಕಪ್ರಜ್ಞೆ ಮೂಡಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಪ್ರಜ್ಞೆ ಮೂಡಿಸಿದ್ದಾರೆ. ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಮಾಡಿದ್ದಾರೆ’ ಎಂದರು.

‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೊರತುಪಡಿಸಿದರೆ 100 ವರ್ಷ ದಾಟಿದ ಹೆಚ್ಚಿನವರು ತಮ್ಮನ್ನು ಗುರುತಿಸಿಕೊಳ್ಳುವಂಥ ಕೆಲಸ ಮಾಡಿಲ್ಲ. ಗುರುಸ್ವಾಮಿ ಅವರು ಅಂಥ ಸಾಧನೆ ಮಾಡಲಿ’ ಎಂದು ಹಾರೈಸಿದರು.

ಸಕ್ಕರೆ ಹಾಗೂ ಸಣ್ಣ ಕೈಗಾರಿಕಾ ಸಚಿವೆ ಎಂ.ಸಿ.ಮೋಹನಕುಮಾರಿ, ‘ಗುರುಸ್ವಾಮಿ ಮಾತುಗಳೇ ಅನುಭವ ಹೂರಣ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಅವರ ಕೊಡುಗೆ ಅನನ್ಯ’ ಎಂದು ಶ್ಲಾಘಿಸಿದರು.

ವಾಟಾಳುವಿನ ಸೂರ್ಯಸಿಂಹಾಸನಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಒಂದು ಪಂಥಕ್ಕೆ ಸೇರಿ ಲೋಕಕಲ್ಯಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಮಧ್ಯಮ ಪಂಥೀಯ ಗುರುಸ್ವಾಮಿ ಅವರ ಕಾರ್ಯ ಶ್ಲಾಘನೀಯ. ಅವರು ಎಲ್ಲ ಪಂಥೀಯವರಿಗೂ ಬೇಕಾದವರು’ ಎಂದರು.

ಹೊಸಮಠದ ಚಿದಾನಂದ ಸ್ವಾಮೀಜಿ, ಸಾಹಿತಿ ಮಲೆಯೂರು ಗುರುಸ್ವಾಮಿ, ಅಭಿನಂದನಾ ಸಮಿತಿ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಸಂಚಾಲಕ ಸಿ.ಚಂದ್ರಶೇಖರ್‌, ಎಸ್‌.ಶಿವಮೂರ್ತಿ ಕಾನ್ಯ, ಚಿನ್ನಸ್ವಾಮಿ ವಡ್ಡಗೆರೆ, ಲೇಖಕ ಡಾ.ಮಹದೇವಸ್ವಾಮಿ ಇದ್ದರು. ಮಲೆಯೂರು ಗುರುಸ್ವಾಮಿ ಅವರ ಬದುಕು–ಬರಹ ಕುರಿತು ಗೋಷ್ಠಿ ಆಯೋಜಿಸಲಾಗಿತ್ತು. ಸಂಜೆ ಅಭಿನಂದನಾ ಸಮಾರಂಭ ನಡೆಯಿತು.

* *

ಎಲ್ಲರೂ ನಮ್ಮವರು ಎನ್ನುವುದು ನಿಜವಾದ ಧರ್ಮ. ಒಳಗೊಳ್ಳುವಿಕೆಯ ರಾಜಕಾರಣ ಮುಖ್ಯ. ದೂರವಿಡುವ ರಾಜಕೀಯದಿಂದ ಹಾಳಾಗುತ್ತಿದ್ದೇವೆ
ಪ್ರೊ.ಚಂದ್ರಶೇಖರ ಪಾಟೀಲ‌
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.