ADVERTISEMENT

`ಹಿಂಗಾದ್ರ ಡಾಟ್ ಕಾಮಿಡಿ' ಹೌಸ್‌ಫುಲ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:21 IST
Last Updated 2 ಸೆಪ್ಟೆಂಬರ್ 2013, 8:21 IST

ಮೈಸೂರು:  ನಗರದ ರಂಗಾಯಣದ ಆವರಣದಲ್ಲಿ ಭಾನುವಾರ ಸಂಜೆ 4.30 ಗಂಟೆಯಿಂದಲೇ ಸರತಿಯಲ್ಲಿ ಪ್ರೇಕ್ಷಕರು ನಿಂತಿದ್ದರು. ಹಾಗೆ ನಿಂತಿದ್ದು ರಂಗಾಯಣದ ಹೊಸ ನಾಟಕ `ಹಿಂಗಾದ್ರ ಡಾಟ್ ಕಾಮಿಡಿ' ನೋಡುವ ಸಲುವಾಗಿ. ಆದರೆ ಟಿಕೆಟ್ ಸಿಗದೆ ನಿರಾಸೆಗೊಂಡು ವಾಪಸು ಹೋದವರೇ ಹೆಚ್ಚು.

ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಾಮಫಲಕ ಹಾಗೂ ಧ್ವನಿವರ್ಧಕದಲ್ಲಿ ಘೋಷಿಸಿದ ಪರಿಣಾಮ ಸಂಜೆ 4.30 ಗಂಟೆಯಿಂದಲೇ ಪ್ರೇಕ್ಷಕರು ಸಾಲಾಗಿ ನಿಂತಿದ್ದರು. 210 ಆಸನಗಳ ಸಾಮರ್ಥ್ಯದ ಭೂಮಿಗೀತದಲ್ಲಿ ನಡೆಯುವ ನಾಟಕದ ಎರಡನೆಯ ಪ್ರಯೋಗ (ಸೆ. 1)ಕ್ಕೆ ಕಳೆದ ವಾರವೇ ಎಲ್ಲ ಟಿಕೆಟುಗಳು ಮಾರಾಟವಾಗಿದ್ದವು. ಭಾನುವಾರ ಮಾತ್ರ ಪ್ರತ್ಯೇಕ 50 ಕುರ್ಚಿ ಹಾಗೂ ಕಾರ್ಪೆಟ್ ಮೇಲೆ ಕುಳಿತುಕೊಳ್ಳಲು ಟಿಕೆಟುಗಳನ್ನು ಮಾರಲಾಯಿತು. ಹೀಗೆ `ಹಿಂಗಾದ್ರ ಡಾಟ್ ಕಾಮಿಡಿ' ನಾಟಕದ ಎರಡನೆಯ ಪ್ರಯೋಗ ಕೂಡಾ ಹೌಸ್‌ಫುಲ್ ಕಂಡಿತು.

`ರಂಗಾಯಣದ ಈಚಿನ ನಾಟಕ ಹೌಸ್‌ಫುಲ್ ಕಂಡಿದ್ದು ಇದೇ ಮೊದಲು. ಕಳೆದ ಭಾನುವಾರ 250 ಪ್ರೇಕ್ಷಕರಿಗೆ ಟಿಕೆಟುಗಳು ಸಿಗದೆ ವಾಪಸು ಹೋದರು. ಈ ವಾರ ಕೂಡಾ ಅನೇಕರು ವಾಪಸು ಹೋದರು. ಬರುವ ಭಾನುವಾರ (ಸೆ. 8)ದ ವಾರಂತ್ಯ ಪ್ರಯೋಗಕ್ಕೆ ಸೋಮವಾರದಿಂದ (ಸೆ. 2) ಬೆಳಿಗ್ಗೆ 10.30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಟಿಕೆಟುಗಳನ್ನು ಪ್ರೇಕ್ಷಕರು ಕೊಳ್ಳಬಹುದು' ಎಂದು ರಂಗಾಯಣದ ಉಪನಿರ್ದೇಶಕ ಎಸ್.ಐ. ಭಾವಿಕಟ್ಟಿ `ಪ್ರಜಾವಾಣಿ'ಗೆ ತಿಳಿಸಿದರು.

`ಸಂತೋಷ ಪವಾರ ಅವರ ಮರಾಠಿಯ ಈ ನಾಟಕವನ್ನು ಅನುವಾದಿಸಿ, ನಿರ್ದೇಶಿಸಿದವರು ಯಶವಂತ ಸರದೇಶಪಾಂಡೆ. ಅವರ ನಗೆಯ ಟಾನಿಕ್ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿದ್ದಾರೆ' ಎಂದು ಅವರು ಹೇಳಿದರು.

`ಈಗಾಗಲೇ ಈ ನಾಟಕ ಪ್ರದರ್ಶಿಸಲು ಗೋವಾ ಹಾಗೂ ರಾಜ್ಯದ ವಿವಿಧೆಡೆಯಿಂದ ಆಹ್ವಾನ ಬಂದಿದೆ. ಸೆ. 3ರಂದು ಬೆಂಗಳೂರಲ್ಲಿ ನಡೆಯುವ ರಂಗ ಸಮಾಜದ ಸಭೆಯಲ್ಲಿ ವಿವಿಧೆಡೆ ನಾಟಕ ಪ್ರದರ್ಶಿಸುವ ಕುರಿತು ಚರ್ಚಿಸಲಾಗುತ್ತದೆ. ಸದ್ಯಕ್ಕೆ ವಾರಂತ್ಯ ಪ್ರಯೋಗವಂತೂ ಗ್ಯಾರಂಟಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.