ADVERTISEMENT

ಹಿನಕಲ್‌ ಗ್ರಾಮಸ್ಥರ ಪ್ರತಿಭಟನೆ

ವಿವಾದಿತ ಸ್ಥಳದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 9:54 IST
Last Updated 16 ಮಾರ್ಚ್ 2018, 9:54 IST
ಪ್ರತಿಭಟನೆ ವೇಳೆ ಕಲ್ಯಾಣಿಗೆ ಧುಮುಕಿದ ಆಟೊ ಚಾಲಕನನ್ನು ರಕ್ಷಿಸಿ ಕರೆತರಲಾಯಿತು
ಪ್ರತಿಭಟನೆ ವೇಳೆ ಕಲ್ಯಾಣಿಗೆ ಧುಮುಕಿದ ಆಟೊ ಚಾಲಕನನ್ನು ರಕ್ಷಿಸಿ ಕರೆತರಲಾಯಿತು   

ಮೈಸೂರು: ಹಿನಕಲ್‌ನ ನನ್ನೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ ನಾಲ್ಕೂವರೆ ಎಕರೆ ಭೂಮಿಗೆ ಕಾಂಪೌಂಡ್‌ ನಿರ್ಮಿಸುತ್ತಿರುವುದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಗುರುವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಕಾಂಪೌಂಡ್‌ ನಿರ್ಮಾಣವನ್ನು ಬಲವಂತವಾಗಿ ತಡೆದ ಪ್ರತಿಭಟನಾಕಾರರು ಇಮ್ಯಾಕ್ಯುಲೇಟ್ ಹಾರ್ಟ್ ಕಾನ್ವೆಂಟ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ನ್ಯಾಯಾಲಯದ ಆದೇಶದ ಅನ್ವಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಪೊಲೀಸರ ಭದ್ರತೆಯೊಂದಿಗೆ ಗುರುವಾರ ಸ್ಥಳಕ್ಕೆ ಧಾವಿಸಿದರು. ವಿವಾದಿತ ಸ್ಥಳ ತಮಗೆ ಸೇರಿದ್ದೆಂಬ ದಾಖಲೆಗಳನ್ನು ತೋರಿಸಿ ಸ್ವಾಧೀನಕ್ಕೆ ಮುಂದಾದರು. ವಿಷಯ ತಿಳಿದು ನೂರಾರು ಗ್ರಾಮಸ್ಥರು ಧಾವಿಸಿ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಮುಡಾ’ ನಿರ್ಲಕ್ಷ್ಯದಿಂದ ಈಗಾಗಲೇ ಪಾರ್ವತಿ ಕಲ್ಯಾಣಿ ಮುಚ್ಚಲಾಗಿದೆ. ನಾಲ್ಕೂವರೆ ಎಕರೆ ಭೂಮಿಯನ್ನು ಗ್ರಾಮಕ್ಕೆ ಮೀಸಲಿಡುವಂತೆ ಮಾಡಿಕೊಂಡ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಯಾವುದೇ ಕಾರಣಕ್ಕೂ ಭೂಮಿ ಖಾಸಗಿ ಸಂಸ್ಥೆಯ ಪಾಲಾಗಲು ಬಿಡುವುದಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಆಟೊ ಚಾಲಕ ಕರಿಯಪ್ಪ ಎಂಬುವರು ಕಲ್ಯಾಣಿಗೆ ಬಿದ್ದರು. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರೇ ಕರಿಯಪ್ಪ ಅವರನ್ನು ರಕ್ಷಿಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದರು.

ನನ್ನೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ 15 ಎಕರೆ ಜಾಗವಿದ್ದು, ಅದರಲ್ಲಿ ಕಲ್ಯಾಣಿಯೂ ಇದೆ. ಪುರಾತನ ಕಲ್ಯಾಣಿಯನ್ನು 2 ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನಕ್ಕೆ ಸೇರಿದ ಜಾಗವನ್ನು ಮುಡಾ ಕಾನೂನು ಬಾಹಿರವಾಗಿ ವಿದ್ಯಾಶ್ರಮ ಎಜುಕೇಷನ್‌ ಫೌಂಡೇಷನ್ ಹಾಗೂ ಇಮ್ಯಾಕ್ಯುಲೇಟ್ ಹಾರ್ಟ್‌ ಕಾನ್ವೆಂಟ್‌ಗೆ ನೀಡಿದೆ ಎಂದು ದೂರಿದರು.

ಈ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ 2013ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಜಾಗ ವಾಪಸು ಮಾಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು.

ಶಾಸಕ ಜಿ.ಟಿ.ದೇವೇಗೌಡ ಸ್ಥಳಕ್ಕೆ ಧಾವಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿ ಶಿವಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.