ADVERTISEMENT

ಹೆಚ್ಚುವರಿ ತೆರಿಗೆ ಹಣ ವಾಪಸ್‌

ಮೈಸೂರು ರಾಜವಂಶಸ್ಥರು–ಆದಾಯ ತೆರಿಗೆ ಇಲಾಖೆ ‘ಸಮರ’ಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 10:25 IST
Last Updated 6 ಏಪ್ರಿಲ್ 2018, 10:25 IST
ಪ್ರಮೋದಾದೇವಿ ಒಡೆಯರ್‌
ಪ್ರಮೋದಾದೇವಿ ಒಡೆಯರ್‌   

ಮೈಸೂರು: ಆಸ್ತಿ ತೆರಿಗೆ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರು ಹಾಗೂ ಆದಾಯ ತೆರಿಗೆ ಇಲಾಖೆ ನಡುವಿನ ನಾಲ್ಕೂವರೆ ದಶಕಗಳ ‘ಹಗ್ಗಜಗ್ಗಾಟ’ಕ್ಕೆ ತೆರೆಬಿದ್ದಿದೆ.

‘ಆದಾಯ ಮತ್ತು ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ 44 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ನಾವು ಹೆಚ್ಚುವರಿಯಾಗಿ ಪಾವತಿಸಿದ ತೆರಿಗೆ ಹಣ ಇಲಾಖೆ ಬಡ್ಡಿ ಸಮೇತ ವಾಪಸ್‌ ನೀಡಿದೆ. ನಮ್ಮಿಂದ ವಶಪಡಿಸಿಕೊಂಡಿದ್ದ ಭೂಮಿ ಬಿಟ್ಟುಕೊಡುವುದಾಗಿ ತಿಳಿಸಿದೆ’ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ವಿವಾದಕ್ಕೆ ಸಂಬಂಧಿಸಿದಂತೆ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಸುದೀರ್ಘ ಕಾಲ ಕಾನೂನು ಹೋರಾಟ ನಡೆಸಿದ್ದರು. ಅವರು ಇದ್ದಾಗಲೇ ಪ್ರಕರಣ ಇತ್ಯರ್ಥಗೊಂಡಿದ್ದರೆ ಚೆನ್ನಾಗಿತ್ತು ಎಂದು ಭಾವುಕರಾದರು.

ಏನಿದು ವಿವಾದ: ರಾಜವಂಶಸ್ಥರ ಆಸ್ತಿಗಳ ಮೌಲ್ಯವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ರಾಜಕುಟುಂಬದವರು ಭಿನ್ನ ರೀತಿಯಲ್ಲಿ ಅಂದಾಜು ಮಾಡಿದ್ದರು. ಇದರಿಂದ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿದ್ದೇವೆ ಎಂಬುದು ರಾಜವಂಶಸ್ಥರ ವಾದವಾಗಿತ್ತು. ರಾಜವಂಶಸ್ಥರು ಹಲವು ವರ್ಷಗಳಿಂದ ತೆರಿಗೆ ಬಾಕಿಯುಳಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಕೆಲವು ಆಸ್ತಿಗಳನ್ನು ತನ್ನ ವಶಕ್ಕೆ ಪಡೆದುಕೊಂಡು ಅದರಿಂದ ಬರುವ ಆದಾಯದಿಂದ ಬಾಕಿ ತೆರಿಗೆ ವಸೂಲಿ ಮಾಡುತ್ತಿತ್ತು.

ADVERTISEMENT

‘ರಾಜಕೀಯ ಚರ್ಚೆ ನಡೆದಿಲ್ಲ’

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಅರಮನೆಗೆ ಭೇಟಿ ನೀಡಿದ್ದ ವೇಳೆ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಪ್ರಮೋದಾದೇವಿ ಸ್ಪಷ್ಟಪಡಿಸಿದರು. ‘ಅದು ಸೌಜನ್ಯದ ಭೇಟಿಯಾಗಿತ್ತು. ಚುನಾವಣೆ ಸಮಯದಲ್ಲಿ ಭೇಟಿ ನೀಡಿದ್ದರಿಂದ ಬೇರೆ ಬೇರೆ ಅರ್ಥ ಕಲ್ಪಿಸಲಾಗಿದೆ. ನನಗೆ ರಾಜ್ಯಸಭಾ ಸದಸ್ಯತ್ವದ ಭರವಸೆ ನೀಡಲಾಗಿದೆ ಎಂಬುದು ಸುಳ್ಳು. ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ನಾನು ಹಲವು ಸಲ ಹೇಳಿದ್ದೇನೆ. ಹಾಗಿರುವಾಗ ರಾಜ್ಯಸಭಾ ಸದಸ್ಯತ್ವದ ಭರವಸೆ ನೀಡುವ ಪ್ರಶ್ನೆಯೇ ಏಳುವುದಿಲ್ಲ’ ಎಂದರು.‘ಯದುವೀರ ಕೂಡಾ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾನೆ. ನಾವು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.