ADVERTISEMENT

ಹೊಸ ಪಠ್ಯಕ್ರಮ: ಶಿಕ್ಷಕರಿಗೆ ತರಬೇತಿ ನಾಳೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 7:55 IST
Last Updated 4 ಜುಲೈ 2012, 7:55 IST
ಹೊಸ ಪಠ್ಯಕ್ರಮ: ಶಿಕ್ಷಕರಿಗೆ ತರಬೇತಿ ನಾಳೆ
ಹೊಸ ಪಠ್ಯಕ್ರಮ: ಶಿಕ್ಷಕರಿಗೆ ತರಬೇತಿ ನಾಳೆ   

ಮೈಸೂರು: ರಾಜ್ಯ ಸರ್ಕಾರ 8 ನೇ ತರಗತಿಗೆ ಜಾರಿ ಮಾಡಿರುವ ಹೊಸ ಪಠ್ಯಕ್ರಮವನ್ನು ಪರಿಣಾಮ ಕಾರಿಯಾಗಿ ಬೋಧಿಸಲು ಸಹಾಯಕವಾಗುವಂತೆ ಜೆಎಸ್‌ಎಸ್ ವಿಜ್ಞಾನ ಮತ್ತು ಸಮಾಜ ಪ್ರತಿಷ್ಠಾನವು ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಮಲ್ಟಿ ಮೀಡಿಯಾ ಸಿಡಿ ಹಾಗೂ ಡಿವಿಡಿ ಹೊರತಂದಿದೆ.

ಆಂಗ್ಲ ಹಾಗೂ ಕನ್ನಡ ಭಾಷೆಗಳೆರಡರಲ್ಲೂ ಇರುವ ಒಟ್ಟು 30 ರಿಂದ 40 ಸಿಡಿಗಳ ಈ ಗುಚ್ಛವನ್ನು ಬಳಸುವ ವಿಧಾನ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಜುಲೈ 5 ರಿಂದ 2ದಿನಗಳವರೆಗೆ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. "

ಈ ತರಬೇತಿ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 25 ಗ್ರಾಮೀಣ ಭಾಗದ ಪ್ರೌಢಶಾಲೆಗಳನ್ನು ಗುರುತಿಸಿ ಉಚಿತವಾಗಿ ಸಿಡಿಗಳನ್ನು ವಿತರಿಸಲು ಪ್ರಾಯೋಜಕತ್ವ ನೀಡುತ್ತಿದೆ. ಮುಂದಿನ ತಿಂಗಳಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಿಗೂ ಸಿಡಿಗಳನ್ನು ಒದಗಿಸುವುದಕ್ಕಾಗಿ ಶಿಕ್ಷಣ ಇಲಾಖೆ ಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ಸಮಾಜ ಪ್ರತಿಷ್ಠಾನದ ಯೋಜನಾ ನಿರ್ದೇಶಕ ಪ್ರೊ.ಕೆ.ಸಿದ್ದಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಪ್ರಾಯೋಜಿತವಾದ ಈ ಯೋಜನೆಗೆ 1.5 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದೆ. ಯೋಜನೆಯ ಅನುಷ್ಠಾನಕ್ಕಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠವು 50 ಲಕ್ಷ ರೂಪಾಯಿಗಳ ಪೂರಕ ನೆರವು ನೀಡಿದೆ ಎಂದು ಅವರು ತಿಳಿಸಿದರು.

ಇನ್ನು ಮೂರು ತಿಂಗಳೊಳಗೆ 9 ಹಾಗೂ 10 ತರಗತಿಗೂ ಇಂಥ ದೃಶ್ಯ ಹಾಗೂ ವಿಷಯ ಘಟಕ ಮಾಲಿಕೆಗಳನ್ನು ತಯಾರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಹಾಗೂ ಎಲ್‌ಸಿಡಿಗಳನ್ನು ಹೊಂದಿರುವ ಪ್ರೌಢಶಾಲೆಗಳಿಗೆ ಮೊದಲ ಆದ್ಯತೆ ಎಂದು ಅವರು ತಿಳಿಸಿದರು.

ಖ್ಯಾತ ವಿಜ್ಞಾನಿಗಳ, ಹಿರಿಯ ಪ್ರಾಧ್ಯಾಪಕರಿಂದ ಉಪನ್ಯಾಸ, ಮಾಹಿತಿ ತಂತ್ರಜ್ಞಾನ, ಆಧುನಿಕ ಮಾಧ್ಯಮ ಪರಿಣಿತರಿಂದ ತಯಾರಿಸಲಾದ ದೃಶ್ಯ ಘಟಕಗಳು, ಅನುಭವಿ ಶಿಕ್ಷಕರಿಂದ ಪಾಠ ಮಂಡನೆ, ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು, ಗ್ರಾಫಿಕ್ಸ್, ಅನಿಮೇಷನ್ ಹಾಗೂ ಸಚಿತ್ರ ವಿವರಣೆಗಳು ಈ ಸಿಡಿಗಳಲ್ಲಿ ಇವೆ.

ಜ. 5ರಂದು ನಡೆಯಲಿರುವ ಕಾರ್ಯಾಗಾರದಲ್ಲಿ 35 ಪ್ರೌಢಶಾಲೆಗಳ ಒಟ್ಟು 100 ಕ್ಕೂ ಅಧಿಕ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿ.ಜಿ. ತಳವಾರ ಉದ್ಘಾಟಿಸುವರು. ಅತಿಥಿಯಾಗಿ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಆಗಮಿಸುವರು. ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ಐ.ಸವದತ್ತಿ ಅಧ್ಯಕ್ಷತೆ ವಹಿಸುವರು. 

ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ್, ಪ್ರೊ. ಪಿ.ವೆಂಕಟರಾಮನ್, ಸಾರ್ವಜನಿಕ ಶಿಕ್ಷಣ ವಿಭಾಗ ನಿರ್ದೇಶಕ ಪ್ರೊ.ಕೆ. ಶಾಂತಯ್ಯ, ಪ್ರೊ.ಶೇಷಗಿರಿರಾವ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಹೊಂಗೆಯಿಂದ `ಡೀಸೆಲ್~ ಉಚಿತ!
ಹೊಂಗೆ ಮರದ ಬೀಜಗಳಿಂದ ಡೀಸೆಲ್ ಉತ್ಪಾದನೆ ಮಾಡಲಾಗುತ್ತದೆ. ಮೂರು ಕೆ.ಜಿ ಹೊಂಗೆ ಬೀಜದಿಂದ 1 ಲೀಟರ್ ಡೀಸೆಲ್ ತಯಾರಿಸಬಹುದು. ಇದಕ್ಕೆ 82 ರೂಪಾಯಿ ವೆಚ್ಚ ತಗುಲುತ್ತದೆ. ಉಪ ಉತ್ಪನ್ನಗಳಾದ ಹಿಂಡಿಯಿಂದ (2 ಕೆ.ಜಿ) 50 ರೂಪಾಯಿ, ಎಥೆನಾಲ್‌ನಿಂದ (ಅರ್ಧ ಕೆ.ಜಿ) 32 ರೂಪಾಯಿ ದೊರಕುತ್ತದೆ. ಅಲ್ಲಿಗೆ ಉತ್ಪಾದನಾ ವೆಚ್ಚ ಸರಿದೂಗಿ `ಡೀಸೆಲ್~ ಉಚಿತವಾಗಿ ಸಿಗುತ್ತದೆ.ವಾನಹಗಳಿಗೆ ಹೊಂಗೆ ಮರದ ಡೀಸೆಲ್ ಬಳಸುವುದರಿಂದ ಮಾಮೂಲಿ ಡೀಸೆಲ್‌ಗಿಂತ 3-4 ಕಿ.ಮೀ ಹೆಚ್ಚು ಮೈಲೇಜ್ ಪಡೆಯಬಹುದು.ಎಂಜಿನ್‌ನ ಕಾರ್ಯದಕ್ಷತೆಯೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.