ಮೈಸೂರು: ಭಾಷಾ ಉಗಮದ ಕುರುಹುಗಳನ್ನು ಗುರುತಿಸಲು ಐತಿಹಾಸಿಕ, ಭೌಗೋಳಿಕ ಭಾಷಾ ವಿಜ್ಞಾನ ಮತ್ತು ಭಾಷಾ ರಚನೆ ಶಿಸ್ತುಗಳು ಸಹಕಾರಿಯಾಗಿದ್ದು, ವಿಶ್ವವಿದ್ಯಾನಿಲಯಗಳು ಈ ವಿಭಾಗಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ಅಧ್ಯಕ್ಷೆ ಪ್ರೊ. ಅನ್ವಿತಾ ಅಬ್ಬಿ ಸಲಹೆ ನೀಡಿದರು.
ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಭಾರತೀಯ ಭಾಷಾ ವಿಜ್ಞಾನ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಆಧುನಿಕ ಭಾಷೆಗಳ ಅಧ್ಯಯನಕ್ಕಿಂತ ಪುರಾತನ, ನಿರ್ಲಕ್ಷಕ್ಕೊಳಗಾದ ಬುಡಕಟ್ಟು ಭಾಷೆಗಳ ಅಧ್ಯಯನವು ಹೆಚ್ಚು ಪ್ರಾಮುಖ್ಯವಾಗಿದೆ. ಬಳಕೆಯಲ್ಲಿಲ್ಲದ ಮತ್ತು ಕಡಿಮೆ ಬಳಕೆಯಲ್ಲಿರುವ ಭಾಷೆಗಳ ಮಾಹಿತಿ ಸಂಗ್ರಹ ಮತ್ತು ದಾಖಲೆ ಕುರಿತು ಭಾಷಾ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಶೋಧನೆಗೆ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ತಿಳಿಸಿದರು.
ಅಳಿವಿನ ಅಂಚಿನಲ್ಲಿರುವ ಪುರಾತನ ಭಾಷೆಗಳ ಅಧ್ಯಯನವು ಭಾಷಾ ವಿಕಾಸಕ್ಕೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸುತ್ತದೆ. ಅಲ್ಲದೇ, ಮಾನವರ ಭಾಷೆಯ ಸಾಮರ್ಥ್ಯ ಮತ್ತು ಮಿತಿಗಳನ್ನು ತಿಳಿಸುತ್ತದೆ. ಮಾನವ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಕಾರ್ಯಸೂಚಿಯಂತೆ ಅಳಿವಿನಂಚಿನ ಭಾಷೆಗಳ ರಕ್ಷಣೆ, ಅಧ್ಯಯನಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕಾಗಿದೆ. ಭಾಷಾ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಮಾನವ ವರ್ತನೆಗಳು, ಪ್ರಭೇದ ಇತ್ಯಾದಿ ಒಳಗೊಂಡ ಅರಿವು ವಿಜ್ಞಾನ, ಸಂಸ್ಕೃತಿ, ಮಾನವಶಾಸ್ತ್ರ, ಪರಿಸರ ಶಿಸ್ತುಗಳ ಸಾಥ್ ಅಗತ್ಯವಾಗಿದೆ.
ಹೀಗಾಗಿ ಭಾಷಾ ಉಗಮಕ್ಕೆ ಸಂಬಂಧಿಸಿದ ಸಂಶೋಧನೆಯು ಅಂತರ್‌ಶಿಸ್ತೀಯ ಮತ್ತು ಅನ್ಯಶಿಸ್ತೀಯ ಅಧ್ಯಯನವಾಗಿದೆ ಎಂದು ವಿಶ್ಲೇಷಿಸಿದರು.
ಭಾಷೆಗಳ ಕುರಿತು ಸಂಶೋಧನೆಗಳು ಹೆಚ್ಚಿದಂತೆ ವಿಭಿನ್ನ ಭಾಷೆಗಳ ಆವಿರ್ಭಾವ, ಪ್ರಾಧಾನ್ಯತೆ, ವಿಭಿನ್ನತೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಆಧುನಿಕ ಯುಗದಲ್ಲಿ ಭಾಷೆಗಳ ವೈಜ್ಞಾನಿಕ ಅಧ್ಯಯನಗಳು ನಡೆಯುತ್ತಿದ್ದು, ಕೇವಲ ಭಾಷಾ ವಿಜ್ಞಾನ ಅಧ್ಯಯನ ವಿಭಾಗವಷ್ಟೇ ಅಲ್ಲದೇ, ಪ್ರಾಯೋಗಿಕ ಮನಃಶಾಸ್ತ್ರ, ನರವಿಜ್ಞಾನ, ಪ್ರಾಚ್ಯವಸ್ತು ಅಧ್ಯಯನ ಶಾಖೆ ಇತ್ಯಾದಿ ವಿಭಾಗಗಳಲ್ಲೂ ಸಂಶೋಧನೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಅವಧೇಶ್‌ಕುಮಾರ್ ಮಿಶ್ರಾ ಮಾತನಾಡಿ, ಪ್ರಮುಖ ಭಾಷೆಗಳಿಂದ ಪ್ರಾಂತೀಯ ಭಾಷೆಗಳಿಗೆ ಅಪಾಯ ಎದುರಾಗಿದೆ ಎಂದು ಹೇಳಿದರು.
ಬಹುಭಾಷಾ ದೇಶವಾದ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಭಾಷೆಗಳ ರಕ್ಷಣೆ ಸವಾಲಿನ ಕೆಲಸವಾಗಿದೆ. ಭಾಷಾ ಸಂಸ್ಥಾನವು ಎಸ್‌ಪಿಪಿಇಎಲ್ ಯೋಜನೆಯಡಿ 10 ಸಾವಿರಕ್ಕಿಂತಲೂ ಕಡಿಮೆ ಭಾಷಿಕರಿರುವ ಭಾಷೆಗಳ ಅಧ್ಯಯನಕ್ಕೆ ಸಿದ್ಧತೆ ನಡೆಸಿದೆ ಎಂದರು.
ಭಾಷಾ ಸಂಸ್ಥಾನದಲ್ಲಿ ಸಿಬ್ಬಂದಿ ಕೊರತೆ ಇದೆ. ಎಸ್‌ಪಿಪಿಇಎಲ್ ಯೋಜನೆಯನ್ನು ದೇಸಿ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಅನಷ್ಠಾನಗೊಳಿಸಲಾಗುವುದು ಎಂದರು. ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ಜರ್ನಲ್ ಅನ್ನು ಬಿಡುಗಡೆಗೊಳಿಸಲಾಯಿತು.
ಭಾರತೀಯ ಭಾಷಾಶಾಸ್ತ್ರ ಸಂಸ್ಥೆಯ ಕಾರ್ಯದರ್ಶಿ ಶೈಲೇಂದ್ರ ಮೋಹನ್, ಸಂಯೋಜಕ ಎಲ್. ರಾಮಮೂರ್ತಿ ಪ್ರೊ.ಎಸ್.ಎನ್. ಶ್ರೀಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.