ಸಾಲಿಗ್ರಾಮ: ‘ಹೊಸ ತಾಲ್ಲೂಕು ಕೇಂದ್ರ ಸಾಲಿಗ್ರಾಮ ದಲ್ಲಿ ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹1 ಕೋಟಿ ಅನುದಾನ ಶೀಘ್ರವೇ ಬಿಡುಗಡೆ ಮಾಡಿಸುತ್ತೇನೆ’ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ಕೆ.ಆರ್.ನಗರ ಪಟ್ಟಣದ ಡಾ.ರಾಜ್ ಬಾನಂಗಳದಲ್ಲಿ ಅವಳಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ‘‘ವಾಲ್ಮೀಕಿ ಜಯಂತಿ’’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
‘ಕೆ.ಆರ್.ನಗರದ ನಾಯಕ ಸಮುದಾಯ ಭವನದಲ್ಲಿ ದೇವಾಲಯ ನಿರ್ಮಾಣ ಮಾಡಲು ಸಮಾಜ ಮುಖಂಡರು ಅನುದಾನ ನೀಡುವಂತೆ ಮನವಿ ಮಾಡಿದ್ದು ಸರ್ಕಾರದಿಂದ ₹ 5ಲಕ್ಷ ಅನುದಾನ ನೀಡಲಾಗಿದೆ’ ಎಂದರು.
‘ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ₹1.5ಕೋಟಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಕಾಂಗ್ರೆಸ್ ಸರ್ಕಾರ ನಾಯಕ ಸಮುದಾಯದ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಸಮಾಜವೇ ಒಪ್ಪುವಂತಹ ಶ್ರೀರಾಮನನ್ನು ಜಗತ್ತಿಗೆ ಮರ್ಯಾದೆ ಪುರುಷೋತ್ತಮ ಎಂದು ಬಿಂಬಿಸಿದ ಮಹರ್ಷಿಗಳ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಳ್ಳಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾತನಾಡಿ,‘1991ರಲ್ಲಿ ಅಂದಿನ ಪ್ರದಾನ ಮಂತ್ರಿ ಚಂದ್ರಶೇಖರ್ ಅವರಿಗೆ ನಾಯಕ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕು ಎಂದು ಅಂದಿನ ಲೋಕಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಶಿಫಾರಸು ಮಾಡಿದ ಫಲವೇ ಇಂದು ಈ ಸಮುದಾಯದ ಜನರು ಹಲವು ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದನ್ನು ಎಂದಿಗೂ ಮರೆಯಬಾರದು’ ಎಂದು ತಿಳಿಸಿದರು.
ಸಾಲಿಗ್ರಾಮದ ಎಸ್.ಎಸ್.ಸಂದೇಶ್, ಪುರಸಭಾ ಸದಸ್ಯ ನಟರಾಜು, ಕೆ.ಎಸ್.ಶಂಕರ್, ಸಿ.ಶಂಕರ್ ಅವರಿಗೆ ‘ವಾಲ್ಮೀಕಿ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗೌರವಿಸಲಾಯಿತು.
ಕೆ.ಆರ್.ನಗರ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ನರಸಿಂಹನಾಯಕ, ಸಾಲಿಗ್ರಾಮ ತಾಲ್ಲೂಕು ಸಂಘದ ಅಧ್ಯಕ್ಷ ಸಿ.ಸಿ. ಮಹದೇವ್, ಶಿಕ್ಷಕ ಅಭಿಲಾಷ್ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಜಿ.ಆರ್.ರಾಮೇಗೌಡ,ಶಿವುನಾಯಕ, ಕೋಳಿ ಪ್ರಕಾಶ್, ಕೆ.ವಿನಯ್, ತಹಶೀಲ್ದಾರ್‌ಗಳಾದ ಸುರೇಂದ್ರಮೂರ್ತಿ, ನರಗುಂದ ಬಿಇಒ ಆರ್.ಕೃಷ್ಣಪ್ಪ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.