ADVERTISEMENT

ಅಪೌಷ್ಟಿಕತೆ: ಬಳಲುತ್ತಿರುವ 132 ಮಕ್ಕಳು

ಬುಡಕಟ್ಟು ಜನರಿಗೆ ಕೊಡುತ್ತಿರುವ ಪೌಷ್ಟಿಕ ಆಹಾರ ಎಲ್ಲಿಗೆ ಹೋಗುತ್ತಿದೆ– ಎನ್.ಜಯರಾಮ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:16 IST
Last Updated 25 ಜೂನ್ 2021, 4:16 IST
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್‌ ಇದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್‌ ಇದ್ದಾರೆ.   

ಮೈಸೂರು: ಜಿಲ್ಲೆಯಲ್ಲಿ 132 ಮಕ್ಕಳು ತೀವ್ರತರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ವಿಷಯ ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್, ‘ಮೈಸೂರಿನಂತಹ ಜಿಲ್ಲೆಗೆ ಈ ವಿಷಯ ಗೌರವ ತರುವಂತದ್ದಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ಮಗುವನ್ನೂ ಅತ್ಯಂತ ಹತ್ತಿರದಿಂದ ಗಮನಿಸಬೇಕು, ಅವರಿಗೆ ಮಕ್ಕಳ ವೈದ್ಯರಿಂದ ಸಲಹೆ ಕೊಡಿಸಬೇಕು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯಲ್ಲಿ ಕಡಿಮೆಯಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಸೂಚನೆ ನೀಡಿದರು.

ADVERTISEMENT

ಇವರಲ್ಲಿ 10 ಮಕ್ಕಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 8 ಮಕ್ಕಳು ಬುಡಕಟ್ಟು ಜನಾಂಗಕ್ಕೆ ಸೇರಿ
ದ್ದಾರೆ. ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ 9,383 ಮಕ್ಕಳ ಪೈಕಿ 1,500 ಮಕ್ಕಳು ಎಚ್.ಡಿ.ಕೋಟೆ ತಾಲ್ಲೂಕಿಗೆ ಸೇರಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದಂತೆ ಕೋಪಗೊಂಡ ಜಯರಾಮ್, ‘ಬುಡಕಟ್ಟು ಜನರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಎಲ್ಲಿಗೆ ಹೋಗುತ್ತಿದೆ’ ಎಂದು ಅಧಿಕಾರಿ
ಗಳನ್ನು ತರಾಟೆಗೆ ತೆಗೆದುಕೊಂಡರು.

‘ಫೋನ್‌ ಇನ್’ ಜನಪ್ರಿಯಗೊಳಿಸಲು ಸೂಚನೆ: ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ನಡೆಸುವ ಫೋನ್‌ ಇನ್ ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ನೀಡಿ, ಜನಪ್ರಿಯಗೊಳಿಸಬೇಕು. ಜತೆಗೆ, ತಾಲ್ಲೂಕು ಮಟ್ಟದಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದು ಅವರು ಸೂಚಿಸಿದರು.

ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ಸಂಬಳ ಆಗುತ್ತಿದೆಯೇ, ಎಲ್ಲ ಸಂಬಳವೂ ಅವರ ಕೈ ಸೇರುತ್ತಿದೆಯೇ ಅಥವಾ ಶಾಲೆಗಳವರು ಬೇರೆ ಬೇರೆ ರೂಪದಲ್ಲಿ ಇವರ ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯಗಳನ್ನು ಕುರಿತು ಪರಿಶೀಲನೆ ನಡೆಸಬೇಕು ಎಂದು ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಅವರಿಗೆ ಹೇಳಿದರು.‌

ಪಡಿತರ ಚೀಟಿ ಹೊಂದಿದವರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿರಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ಅವರಿಗೆ ಸೂಚಿಸಿದ ಜಯರಾಮ್, ‘ತೂಕದಲ್ಲಿ ಮೋಸ ಆಗುತ್ತಿದೆಯೇ, ನಿಗದಿಯಷ್ಟು ಆಹಾರ ಧಾನ್ಯ ನೀಡಲಾಗುತ್ತಿದೆಯೇ, ಪಡೆದ ಆಹಾರ ಧಾನ್ಯಗಳು ಅಂಗಡಿಗಳಿಗೆ ಮಾರಾಟ ಆಗುತ್ತಿದೆಯೇ ಎಂಬುದನ್ನೆಲ್ಲ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.