ADVERTISEMENT

ಸಂತ್ರಸ್ತರ ಬಹಿರಂಗ ಅಧಿವೇಶನ 14ಕ್ಕೆ

ತಲಕಾವೇರಿಯಿಂದ ಬೆಂಗಳೂರಿಗೆ ವಾಹನ ಜಾಥಾ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 14:45 IST
Last Updated 10 ಅಕ್ಟೋಬರ್ 2019, 14:45 IST

ಮೈಸೂರು: ‘ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅ.14ರಂದು ನೆರೆ-ಬರ ಸಂತ್ರಸ್ತರ ಬಹಿರಂಗ ಅಧಿವೇಶನ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ಬಹಿರಂಗ ಅಧಿವೇಶನಕ್ಕಾಗಿಯೇ ಅ.12ರ ಶನಿವಾರ ತಲಕಾವೇರಿಯಿಂದ ವಾಹನ ಜಾಥಾ ನಡೆಸಲಾಗುವುದು. ರಾಜ್ಯದ ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರಿನ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರವೇ ಹೇಳಿಕೊಂಡಂತೆ ಕನಿಷ್ಠ ₹ 10,000 ತಾತ್ಕಾಲಿಕ ಪರಿಹಾರವೂ ಶೇ 10ರಷ್ಟು ನೆರೆ ಸಂತ್ರಸ್ತರಿಗೆ ಸಿಕ್ಕಿಲ್ಲ. ಇದೂವರೆಗೂ ಮನೆ ನಿರ್ಮಾಣಕ್ಕೆ ಚಾಲನೆಯೇ ದೊರೆತಿಲ್ಲ. ಜಾನುವಾರು ಸಾವಿಗೆ ಪರಿಹಾರವೇ ದೊರೆತಿಲ್ಲ. ಜನರ ಹಾದಿ ತಪ್ಪಿಸಲು ಜಾಹೀರಾತು ನೀಡಲಾಗುತ್ತಿದೆ’ ಎಂದು ನಾಗೇಂದ್ರ ಕಿಡಿಕಾರಿದರು.

ADVERTISEMENT

‘ಕೇಂದ್ರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಅ.14ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು. ರೈತರ ಸಂಕಷ್ಟಕ್ಕೆ ಸ್ಪಂದನೆ ಸಿಗದಿದ್ದರೆ, ಕೇಂದ್ರ ಸಚಿವರ ಮನೆ ಮುಂದೆ ಹೋರಾಟ ನಡೆಸಲಾಗುವುದು. ಇದಕ್ಕೂ ಸೂಕ್ತ ಸ್ಪಂದನೆ ಸಿಗದಿದ್ದರೆ ಹಂತ ಹಂತವಾಗಿ ರಾಜ್ಯದ ಎಲ್ಲ ಸಂಸದರ ಮನೆ ಮುಂದೆ ಹಾಗೂ ಶಾಸಕರು, ಸಚಿವರು, ಮುಖ್ಯಮಂತ್ರಿ ಮನೆ ಮುಂಭಾಗವೂ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಎನ್‌ಡಿಆರ್‌ಎಫ್ ಮಾರ್ಗಸೂಚಿ ಸರಿಯಿಲ್ಲ. ಹಲವು ವರ್ಷಗಳ ಹಿಂದೆ ರೂಪುಗೊಂಡಂತಹವು. ಮೊದಲು ಇವನ್ನು ಬದಲಿಸಬೇಕಿದೆ’ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ದೇಶದಲ್ಲಿ ಕೇಂದ್ರ ಸರ್ಕಾರ ಯಜಮಾನನ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ಇದೇ ಸಂದರ್ಭ ಹರಿಹಾಯ್ದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ರಾಜ್ಯದ ಕೆರೆ-ಕಟ್ಟೆ, ನದಿಗಳು ತುಂಬಿದವು. ರಾಜ್ಯ ಸುಭಿಕ್ಷವಾಗಿದೆ ಎಂದು ಅವಿವೇಕಿಗಳು ಹೇಳುತ್ತಿದ್ದಾರೆ. ಆದರೆ ರಾಜ್ಯ ಸುಭಿಕ್ಷವಾಗಿಲ್ಲ. ಅನಾನುಕೂಲವೇ ಹೆಚ್ಚಾಗಿದೆ’ ಎಂದು ನಾಗೇಂದ್ರ ಕಿಡಿಕಾರಿದರು.

ಒಪ್ಪಂದಕ್ಕೆ ವಿರೋಧ: ‘ಏಷ್ಯಾದ 16 ರಾಷ್ಟ್ರಗಳ ನಡುವಿನ ಆರ್‌ಸಿಎಫ್ ಒಪ್ಪಂದಕ್ಕೆ ನವೆಂಬರ್‌ನಲ್ಲಿ ಸಹಿ ಹಾಕಲು ಭಾರತ ನಿರ್ಧರಿಸಿದ್ದು, ಇದನ್ನು ದೇಶದ ಎಲ್ಲ ರೈತ ಸಂಘಟನೆಗಳೂ ವಿರೋಧಿಸುತ್ತವೆ. ಒಂದು ವೇಳೆ ಸಹಿ ಹಾಕಿದಲ್ಲಿ ದೇಶದ ರೈತರು, ಕಾರ್ಮಿಕರು ಬೀದಿ ಪಾಲಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಎಚ್.ಸಿ.ಲೋಕೇಶ್‌ರಾಜೇ ಅರಸ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಅಶ್ವಥ್‍ರಾಜೇ ಅರಸ್, ಸ್ವರಾಜ್ ಇಂಡಿಯಾದ ಪುನೀತ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.