ADVERTISEMENT

2025ರ ಹಿನ್ನೋಟ: ಕ್ರೀಡೋತ್ಸಾಹ ಹೆಚ್ಚಿಸಿದ ದಸರಾ, ಕ್ರಿಕೆಟ್

ವರ್ಷವಿಡೀ ವಿವಿಧ ಕ್ರೀಡಾಕೂಟಗಳ ರಂಗು

ಆರ್.ಜಿತೇಂದ್ರ
Published 27 ಡಿಸೆಂಬರ್ 2025, 4:13 IST
Last Updated 27 ಡಿಸೆಂಬರ್ 2025, 4:13 IST
ಮಹಾರಾಜ ಟ್ರೋಫಿ ವಿಜೇತ ಮಂಗಳೂರು ಡ್ರಾಗನ್ಸ್ ತಂಡದ ಆಟಗಾರರ ಸಂಭ್ರಮ. ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.
ಮಹಾರಾಜ ಟ್ರೋಫಿ ವಿಜೇತ ಮಂಗಳೂರು ಡ್ರಾಗನ್ಸ್ ತಂಡದ ಆಟಗಾರರ ಸಂಭ್ರಮ. ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.   

ಮೈಸೂರು: ಈ ವರ್ಷ ಕ್ರಿಕೆಟ್‌, ದಸರಾ ಕ್ರೀಡಾಕೂಟಗಳು ಸಾಂಸ್ಕೃತಿಕ ನಗರಿಯ ಕ್ರೀಡಾಪ್ರಿಯರ ಉತ್ಸಾಹ ಹೆಚ್ಚಿಸಿದವು. ವರ್ಷವಿಡೀ ಒಂದಲ್ಲ ಒಂದು ಚಟುವಟಿಕೆಗಳು ರಂಗು ತುಂಬಿದವು. ಕ್ರೀಡಾಪಟುಗಳು ತಮ್ಮ ಪ್ರತಿಭೆ ಒರೆ ಹಚ್ಚಿ ಪದಕಗಳ ಬೇಟೆಯಾಡಿದರು.

ಈ ವರ್ಷ ಹೆಚ್ಚು ಕಾಲ ಮನರಂಜನೆ ಒದಗಿಸಿದ್ದು ಮಹಾರಾಜ ಕ್ರಿಕೆಟ್‌ ಟ್ರೋಫಿ. ಬರೋಬ್ಬರಿ ಮೂರು ವಾರ ನಡೆದ ಟೂರ್ನಿಯಲ್ಲಿ ಸಾಕಷ್ಟು ಪ್ರತಿಭೆಗಳು ಹೊಳೆದವು. ಆದರೆ ಈ ಬಾರಿ ಪ್ರೇಕ್ಷಕರನ್ನು ಮೈದಾನದಿಂದ ಹೊರಗಿಟ್ಟು ಟೂರ್ನಿ ನಡೆಯಿತು.

2022ರಲ್ಲಿ ಕೆಪಿಎಲ್‌ ಬದಲಿಗೆ ಮಹಾರಾಜ ಟ್ರೋಫಿ ಟೂರ್ನಿಗೆ ಚಾಲನೆ ದೊರೆತಿದ್ದು, ಮೊದಲ ಆವೃತ್ತಿಯ ಆರಂಭಿಕ ಪಂದ್ಯಗಳು ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದದ್ದು ವಿಶೇಷ. ಈ ಬಾರಿ ಅಚಾನಕ್ಕಾಗಿ ಒದಗಿ ಬಂದ ಅವಕಾಶವನ್ನು ಕೆಎಸ್‌ಸಿಎ ಮೈಸೂರು ವಲಯ ಬಳಸಿಕೊಂಡಿದ್ದು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಆ. 11ರಿಂದ 28ರವರೆಗೆ ಪಂದ್ಯಗಳು ನಡೆದವು.

ADVERTISEMENT

ಲೀಗ್‌ ಹಂತದಲ್ಲಿ 30 ಸೇರಿದಂತೆ ಒಟ್ಟು 33 ಪಂದ್ಯಗಳು ಟೂರ್ನಿಯಲ್ಲಿ ನಡೆದವು. ಎಲ್ಲದ್ದಕ್ಕೂ ಒಂದೇ ಕ್ರೀಡಾಂಗಣ ಆತಿಥ್ಯ ವಹಿಸಿತು. ಸಾಕಷ್ಟು ಆಟಗಾರರ ಅಬ್ಬರದ ಆಟಕ್ಕೂ ಸಾಕ್ಷಿ ಆಯಿತು. ಆರು ತಂಡಗಳ ಪೈಕಿ ಹುಬ್ಬಳ್ಳಿ ಟೈಗರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಗುಲ್ಬರ್ಗ ಮಿಸ್ಟಿಕ್ಸ್‌ ತಂಡಗಳು ಪ್ಲೇ ಆಫ್‌ ಹಂತ ಪ್ರವೇಶಿಸಿದ್ದವು. ಫೈನಲ್‌ನಲ್ಲಿ ಮಳೆಯ ಕಾಟದ ನಡುವೆ ವಿಜೆಡಿ ನಿಯಮದಂತೆ ಮಂಗಳೂರು ಗೆದ್ದು ಪ್ರಶಸ್ತಿ ಎತ್ತಿ ಹಿಡಿಯಿತು. ಮಳೆಯಲ್ಲೇ ಆಟಗಾರರು ಕುಣಿದು ಕುಪ್ಪಳಿಸಿದರು.

ದಸರಾ ಕ್ರೀಡಾಕೂಟ:

ಈ ಬಾರಿಯೂ ದಸರಾ ಸಂದರ್ಭ ನಡೆದ ಕ್ರೀಡಾಕೂಟ ಎಲ್ಲರ ಆಕರ್ಷಣೆ ಆಯಿತು. ಸೆ.22ರಂದು ಒಲಿಂಪಿಕ್ಸ್ ಕುಸ್ತಿ ಪಟು ವಿನೇಶಾ ಪೊಗಟ್‌ ಚಾಲನೆ ನೀಡಿದ್ದು, ಅಥ್ಲೆಟಿಕ್ಸ್‌ ಹಾಗೂ ಗುಂಪು ವಿಭಾಗದ ಕ್ರೀಡೆಗಳೆರೆಡರಲ್ಲೂ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ನಗರ ವಿಭಾಗವು ‘ಸಿ.ಎಂ. ಕಪ್‌’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಒಟ್ಟು 27 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆದವು. ಪ್ರತಿ ವಿಭಾಗದಿಂದ 900 ಕ್ರೀಡಾಪಟುಗಳಂತೆ ರಾಜ್ಯದ 5 ವಿಭಾಗಗಳಿಂದ 3,500 ಸ್ಪರ್ಧಿಗಳು ಪಾಲ್ಗೊಂಡರು.

ಸೆ. 22ರಿಂದ ಸೆ. 28ರವರೆಗೆ ಒಂದು ವಾರ ಕಾಲ ಕುಸ್ತಿ ಟೂರ್ನಿಯು ರಂಜಿಸಿತು. ಒಟ್ಟು 250 ಜೋಡಿಗಳು ಡಿ. ದೇವರಾಜ ಅರಸು ಕ್ರೀಡಾಂಗಣದ ಮಣ್ಣಿನಲ್ಲಿ ದೂಳೆಬ್ಬಿಸಿದವು. ಪಾಯಿಂಟ್ ಕುಸ್ತಿಯ ಜೊತೆಗೆ ನಾಡಕುಸ್ತಿ ಪ್ರೇಕ್ಷಕರನ್ನು ಸೆಳೆಯಿತು.

ವಿಜೇತರು ಸಾಹುಕಾರ್‌ ಚೆನ್ನಯ್ಯ ಕಪ್‌, ಮೈಸೂರು ಮಹಾರಾಜ ಒಡೆಯರ್‌ ಕಪ್‌, ಮೈಸೂರು ಮೇಯರ್‌ ಕಪ್‌ ಮತ್ತು ಕಿತ್ತೂರು ರಾಣಿ ಚನ್ನಮ್ಮ ಕಪ್‌ ಎತ್ತಿ ಹಿಡಿದರು. ಸೆ. 27ರಂದು 10ನೇ ರಾಜ್ಯಮಟ್ಟದ ಹಾಗೂ 7ನೇ ಅಂಗವಿಕಲರ ಪಂಜಕುಸ್ತಿ ಟೂರ್ನಿ ರಂಜಿಸಿತು. ಪುರುಷರಲ್ಲಿ ಒಟ್ಟು 11 ವಿಭಾಗ ಹಾಗೂ ಮಹಿಳೆಯರಿಗೆ 7 ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ದಸರಾ ಕ್ರೀಡಾಕೂಟದ ಬೆನ್ನಲ್ಲೇ ಕ್ರೀಡಾ ಇಲಾಖೆಯು ಸೆ. 28ರಂದು ‘ ಡಿವೈಇಎಸ್‌ ದಸರಾ 10ಕೆ ರಸ್ತೆ ಓಟ’ ನಡೆಸಿತು. ಪೊಲೀಸ್ ಇಲಾಖೆಯ ಅಥ್ಲೀಟ್‌ಗಳಾದ ಗುರುಪ್ರಸಾದ್ ಮತ್ತು ಸಿ.ಪೂರ್ಣಿಮಾ ಅವರು ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಸೆ. 10–11ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು.

ಕಾಲೇಜು ಕ್ರೀಡಾಕೂಟಗಳು:

ನ.11ರಿಂದ 13ರವರೆಗೆ ಓವೆಲ್‌ ಮೈದಾನದಲ್ಲಿ ಮೈಸೂರು ವಿ.ವಿ. ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್‌ ನಡೆದಿದ್ದು, ಮಾನಸಗಂಗೋತ್ರಿಯ ಕ್ರೀಡಾ ಮಂಡಳಿ ಹಾಗೂ ತಿ. ನರಸೀಪುರದ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜು ತಂಡಗಳು ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡವು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ಮಹಾವಿದ್ಯಾಲಯಗಳ ಕ್ರೀಡಾಕೂಟವು ಡಿಸೆಂಬರ್ 11ರಿಂದ 14ರವರೆಗೆ ಓವೆಲ್ಸ್ ಮೈದಾನದಲ್ಲಿ ನಡೆದಿದ್ದು, ಮೈಸೂರು ಕೃಷಿ ಮಹಾವಿದ್ಯಾಲಯವು ಸಮಗ್ರ ಚಾಂಪಿಯನ್‌ ಆಯಿತು. ರಾಜ್ಯದ 10 ಕೃಷಿ ಕಾಲೇಜುಗಳ 900 ಸ್ಪರ್ಧಿಗಳು ಪಾಲ್ಗೊಂಡರು.

ಮ್ಯಾರಥಾನ್‌:

ಅ.26ರಂದು ಭಾರತೀಯ ಅಂಚೆ ಇಲಾಖೆಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳಿಂದ ಬರೋಬ್ಬರಿ 3,417 ಸ್ಪರ್ಧಿಗಳು ಓಡಿದರು. ಸಿ.ಎಸ್‌. ಲಕ್ಷ್ಮೀಶ ಹಾಗೂ ಬಿಜೋಯಾ ಬರ್ಮನ್‌ 42.2 ಕಿಲೋಮೀಟರ್ ದೂರ ಕ್ರಮಿಸಿ ಚಾಂಪಿಯನ್‌ ಆದರು. ಹಾಫ್‌ ಮ್ಯಾರಥಾನ್‌ (21.1 ಕಿ.ಮೀ), 10 ಕಿ.ಮೀ. ಹಾಗೂ 5 ಕಿ.ಮೀ. ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆದವು.

ಕ್ರಿಕೆಟ್‌:

ಸೆಪ್ಟೆಂಬರ್‌ನಲ್ಲಿ ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಕ್ರಿಕೆಟ್‌ ಟೂರ್ನಿ ಗುಂಪಿನ ಪಂದ್ಯಗಳು ನಡೆದವು. ನವೆಂಬರ್ 2ರಿಂದ 5ರವರೆಗೆ ನಡೆದ ಸಿ.ಕೆ. ನಾಯ್ಡು ಟ್ರೋಫಿ 23 ವರ್ಷದ ಒಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕಕ್ಕೆ ಛತ್ತೀಸ್‌ಗಢ ಸೋಲಿನ ರುಚಿ ತೋರಿಸಿತು.

ಡಿ. 16ರಿಂದ 19ರವರೆಗೆ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಕೂಚ್‌ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಪಂದ್ಯ ನಡೆದಿದ್ದ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ನಡುವಿನ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.

ನ.15–16ರಂದು ಸರಸ್ವತಿಪುರಂನ ಈಜುಕೊಳದಲ್ಲಿ 16ನೇ ರಾಜ್ಯ ಜೂನಿಯರ್ ವಾಟರ್‌ಪೋಲೊ ಚಾಂಪಿಯನ್‌ಷಿಪ್ ನಡೆಯಿತು. ಅ. 6ರಿಂದ 9ರವರೆಗೆ ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್‌ ಚೆಸ್ ಟೂರ್ನಿ ನಡೆಯಿತು.

ಕೊಕ್ಕೊದಲ್ಲಿ ಚೈತ್ರಾ ವಿಶ್ವಖ್ಯಾತಿ

ಜನವರಿ 20ರಂದು ನವದೆಹಲಿಯಲ್ಲಿ ನಡೆದ ಚೊಚ್ಚಲ ಕೊಕ್ಕೊ ವಿಶ್ವಕಪ್‌ ಫೈನಲ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಭಾರತ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದವರು ಕುರುಬೂರಿನ ಕೊಕ್ಕೊ ಆಟಗಾರ್ತಿ ಚೈತ್ರಾ. ಇದೊಂದು ಗೆಲುವು ಹಳ್ಳಿಹಕ್ಕಿಯಂತಿದ್ದ ಚೈತ್ರಾಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಬರಿಗಾಲಲ್ಲಿ ಓಡುತ್ತ ಸತತ ಅಭ್ಯಾಸದಿಂದ ಸಾಧನೆಯ ಒಂದೊಂದೇ ಮೆಟ್ಟಿಲೇರಿದ ಆಕೆಗೆ ಪ್ರಶಂಸೆಯ ಸುರಿಮಳೆಯೇ ಬಂತು. ಸರ್ಕಾರದಿಂದ ನಗದು ಪುರಸ್ಕಾರದ ಜೊತೆಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ನಂತರದಲ್ಲಿ ವರ್ಷವಿಡೀ ಚೈತ್ರಾ ಸುದ್ದಿಯಲ್ಲಿದ್ದರು.

ಶ್ರಾವಣಿ ಸಂಭ್ರಮ

ಮಲೇಷ್ಯಾದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ 16 ವರ್ಷ ಒಳಗಿನವರ ಎಫ್‌ಐಬಿಎ ಏಷ್ಯಾ ಕಪ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿ ಮೈಸೂರಿನ ಎಕ್ಸೆಲ್‌ ಪಬ್ಲಿಕ್‌ ಶಾಲೆಯ ಪ್ರಥಮ ಪಿ.ಯು. ವಿದ್ಯಾರ್ಥಿನಿ ಶ್ರಾವಣಿ ಶಿವಣ್ಣ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದರು. ಮೈಸೂರಿನಿಂದ ಭಾರತ ತಂಡಕ್ಕೆ ಆಯ್ಕೆಯಾದ ಏಕೈಕ ಕ್ರೀಡಾಪಟು ಇವರಾಗಿದ್ದು ಫಾರ್ವರ್ಡ್ ಆಟಗಾರ್ತಿಯಾಗಿ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಹಿಂದೆ ರಾಷ್ಟ್ರೀಯ ಸಬ್‌ ಜೂನಿಯರ್‌ ಯೂತ್‌ ಹಾಗೂ ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಬೆಳಗಿದ ಪ್ರತಿಭೆಗಳು

ಮೈಸೂರಿನ ಹಲವು ಪ್ರತಿಭೆಗಳು ಈ ವರ್ಷ ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಬೆಳಗಿದವು. ಈಜುಪಟು ಎಸ್. ತಾನ್ಯಾ ಈಜಿನಲ್ಲಿ ಪದಕಗಳ ಬೇಟೆ ಮುಂದುವರಿಸಿದ್ದು ಆಗಸ್ಟ್‌ 3ರಿಂದ 7ರವರೆಗೆ ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಒಟ್ಟು 4 ಪದಕ ಗೆದ್ದರು. ಜಿಎಸ್‌ಎಸ್‌ ಕಾಲೇಜಿನ ಪ್ಯಾರ ಅಥ್ಲೀಟ್‌ ಬಿ. ಭಾರತಿ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ ಏಷ್ಯನ್‌ ಯುವ ಪ್ಯಾರ ಗೇಮ್ಸ್‌ನ ಮಹಿಳೆಯರ ಲಾಂಗ್‌ ಜಂಪ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದರು. ಮೈಸೂರಿನವರೇ ಆದ ಎಚ್‌.ಎಸ್. ರಕ್ಷಿತ್‌ ಪುರುಷರ ಹೈಜಂಪ್‌ (ಎಫ್‌–42) ವಿಭಾಗದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು. ಮೈಸೂರಿನ ಗಾಲ್ಫರ್ ಪ್ರಣವಿ ಅರಸ್‌ ವಿವಿಧ ಅಂತರರಾಷ್ಟ್ರೀಯ ಗಾಲ್ಫ್ ಟೂರ್ನಿಗಳಲ್ಲಿ ಗಮನ ಸೆಳೆದರು. ಮೈಸೂರಿನ ಪದ್ಮಪ್ರಿಯಾ ರಮೇಶ್ ಟೆನಿಸ್‌ನಲ್ಲಿ ಹಲವು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪದಕ ಗೆಲ್ಲುವ ಮೂಲಕ ಭರವಸೆ ಹೆಚ್ಚಿಸಿದರು. ಪ್ರಜ್ವಲ್ ದೇವ್‌ ಹಲವು ಐಟಿಎಫ್‌ ಟೂರ್ನಿಗಳಲ್ಲಿ ಪದಕಗಳಿಗೆ ಕೊರಳೊಡ್ಡಿದರು.

ದಸರಾ ಕ್ರೀಡಾಕೂಟದ ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಗುರಿಯತ್ತ ಮುನ್ನುಗ್ಗಿದ ಅಥ್ಲೀಟ್‌ಗಳು
ದಸರಾ ನಾಡಕುಸ್ತಿಯಲ್ಲಿ ಮಹದೇವಪುರದ ವಿಕಾಸ್ ಹಾಗೂ ದಾವಣಗೆರೆಯ ಕಿರಣ್ ನಡುವಿನ ಸೆಣಸಾಟದ ರೋಚಕ ಕ್ಷಣ. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.