ADVERTISEMENT

22ರಂದು ವಿವೇಕ ಪಾದಸ್ಪರ್ಶ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 8:50 IST
Last Updated 12 ಏಪ್ರಿಲ್ 2012, 8:50 IST

ಮೈಸೂರು: ಸ್ವಾಮಿ ವಿವೇಕಾನಂದ ಅವರ 150ನೇ ಜಯಂತಿಯ ಅಂಗವಾಗಿ ಏ.22ರಂದು ಮೈಸೂರು ಅರಮನೆ ಆವರಣದಲ್ಲಿ ಮೈಸೂರು ಅರಮನೆ ಮಂಡಳಿ, ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ರಾಮಕಷ್ಣ ಆಶ್ರಮದ ಸಂಯುಕ್ತ ಆಶ್ರಯದಲ್ಲಿ ವಿವೇಕ ಪಾದಸ್ಪರ್ಶ ಸ್ಮರಣ ಸಮಾರಂಭ ಆಯೋಜಿಸಲಾಗಿದೆ.

ಅಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತಿತರರು ಭಾಗ ವಹಿಸುವರು. ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಅವರು ಸ್ವಾಮಿ ವಿವೇಕಾನಂದರು ಮೈಸೂರಿನ ಅರಮನೆಗೆ ಆಗಮಿಸಿ ಮಹಾರಾಜರನ್ನು ಭೇಟಿ ಮಾಡಿದ್ದು ಅಪೂರ್ವ ಘಟನೆಯಾಗಿದ್ದು, ಇದರ ಸ್ಮರ ಣಾರ್ಥ ನಡೆಯುವ ಕಾರ್ಯಕ್ರಮದ ಯಶಸ್ಸಿಗೆ ಸರ್ವರೂ ಸಹಕರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವಿವೇಕ ಸ್ಮಾರಕದ ಉದ್ಘಾಟನೆಯನ್ನು ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ತಂಗಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚಿಸಿ, 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಮಾರಕ ನಿರ್ಮಿಸಲು ಉದ್ದೇಶಿಸಿದ ಸ್ಥಳದ ಸ್ವಲ್ಪಭಾಗ ಶಿಕ್ಷಣ ಇಲಾಖೆಗೆ ಸೇರಿದ್ದು, ಈ ಜಾಗವನ್ನು ಟ್ರಸ್ಟ್‌ಗೆ ವಹಿಸಿಕೊಡಬೇಕೆಂದು ಕೋರಿದರು.

ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಮಕಷ್ಣಾಶ್ರಮದ ವತಿಯಿಂದ ಏಪ್ರಿಲ್ 20 ರಿಂದ 23ರವರೆಗೆ ಭಾರತೀಯ ಆಧ್ಯಾತ್ಮಿಕ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಿದ್ದು, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಪ್ರತಿನಿಧಿಗಳು ಭಾಗವಹಿಸುವರು ಎಂದು ಮೈಸೂರು ರಾಮಕಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ತಿಳಿಸಿದರು.

ಕರ್ನಾಟಕ ಸಂಸ್ಕೃತಿ ಮತ್ತು ಸ್ವಾಮಿ ವಿವೇಕಾನಂದರ ಮೈಸೂರಿನ ಭೇಟಿ ಕುರಿತ ಲೇಸರ್ ಪ್ರದರ್ಶನವನ್ನು ಏ.22ರಂದು ಅರಮನೆ ಆವರಣದಲ್ಲಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ನಗರಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ಸೇರಿದಂತೆ ವಿವಿಧ ಅಧಿಕಾರಿಗಳು ವಿವೇಕಾನಂದ ಸ್ಮಾರಕ ಟ್ರಸ್ಟ್‌ನ ಸದಸ್ಯರು ಸಭೆಯಲ್ಲಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.