ADVERTISEMENT

2 ತಿಂಗಳಲ್ಲಿ 23 ಬಾಲ್ಯವಿವಾಹ: ದೂರು

ಬಹುತೇಕ ಪ್ರಕರಣಗಳನ್ನು ವಿವಾಹಕ್ಕೂ ಮುಂಚೆಯೇ ತಡೆದ ಅಧಿಕಾರಿಗಳು

ಕೆ.ಎಸ್.ಗಿರೀಶ್
Published 17 ಜೂನ್ 2021, 5:41 IST
Last Updated 17 ಜೂನ್ 2021, 5:41 IST
ಮೈಸೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು
ಮೈಸೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು   

ಮೈಸೂರು: ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದೆರಡು ತಿಂಗಳುಗಳಲ್ಲಿ 23 ದೂರುಗಳು ಈ ಕುರಿತು ಬಂದಿವೆ.

ಬಹುತೇಕ ಎಲ್ಲ ಪ್ರಕರಣಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿಶೇಷ ಪೊಲೀಸ್ ಮಕ್ಕಳ ಘಟಕದ ಅಧಿಕಾರಿ
ಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲ್ಯವಿವಾಹ ನೆರವೇರಿದ ಕುರಿತು ಒಂದು ಪ್ರಕರಣವಷ್ಟೇ ದಾಖಲಾಗಿದೆ.

ನಸುಕಿನ ವೇಳೆಗೆ ಹಾಗೂ ಬೆಳಿಗ್ಗೆ 8 ಗಂಟೆಗೂ ಮುಂಚಿತವಾಗಿ ಸಿಗುವ ಮುಹೂರ್ತದಲ್ಲೇ ಬಹುತೇಕ ಮದುವೆಗಳು ನಿಶ್ಚಯವಾಗಿ
ದ್ದವು. ಈ ಕುರಿತು ಮಕ್ಕಳ ಸಹಾಯವಾಣಿ 1098ಕ್ಕೆ ದೂರುಗಳು ಬರುತ್ತಿದ್ದಂತೆ ಅಧಿಕಾರಿಗಳು ಮದುವೆಗೂ ಮುನ್ನವೇ ಸ್ಥಳಕ್ಕೆ ತೆರಳಿ ಮದುವೆಯಾಗುವುದನ್ನು ತಡೆದಿದ್ದಾರೆ.‌

ADVERTISEMENT

ಬಹುತೇಕ ಪ್ರಕರಣಗಳಲ್ಲಿ ಬಾಲಕಿಯರ ಸ್ನೇಹಿತೆಯರು ಹಾಗೂ ಈಕೆಯನ್ನು ಪ್ರೀತಿಸುತ್ತಿರುವ ಯುವಕರೇ ಸಹಾಯ
ವಾಣಿಗೆ ಕರೆ ಮಾಡಿ ವಿವಾಹ ಆಗುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಕ್ಕಳ ಸಹಾಯವಾಣಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮದುವೆಗಾಗಿ ಆಮಂತ್ರಣ ಪತ್ರಿಕೆಗಳನ್ನೂ ಪೋಷಕರು ಮುದ್ರಿಸಿರುತ್ತಿರಲಿಲ್ಲ. ಬಂಧು ಬಳಗವನ್ನೂ ಆಹ್ವಾನಿಸುತ್ತಿರಲಿಲ್ಲ. ತೀರಾ ಸಮೀಪದ ಬಂಧುಗಳನ್ನಷ್ಟೇ ಆಹ್ವಾನಿಸಲಾಗುತ್ತಿತ್ತು. ಬಹಳ ಗೌಪ್ಯವಾಗಿಯೇ ಮದುವೆಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ಮದುವೆ ಒಲ್ಲದ ಬಾಲಕಿಯು ತನ್ನ ಸ್ನೇಹಿತೆಯರಿಗೆ ವಿಷಯ ಮುಟ್ಟಿಸಿ, ಸಹಾಯವಾಣಿಗೆ ಕರೆ ಮಾಡುವ ಮೂಲಕ ಮದುವೆಗಳನ್ನು ತಡೆದಿದ್ದಾರೆ.

ಕಳೆದ ವರ್ಷ ಕೆ.ಆರ್.ನಗರದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ಬಾರಿ ಅಲ್ಲಿ ಕೇವಲ ಒಂದು ಪ್ರಕರಣವಷ್ಟೇ ಕಂಡು ಬಂದಿದೆ. ಅತ್ಯಂತ ಹೆಚ್ಚು ಪ್ರಕರಣಗಳು ಪಿರಿಯಾಪಟ್ಟಣ (6)ದಲ್ಲಿ ಕಂಡು ಬಂದಿದ್ದರೆ, ಎಚ್.ಡಿ.ಕೋಟೆ (5), ನಂಜನಗೂಡು (5), ಹುಣಸೂರು (3), ಮೈಸೂರು ತಾಲ್ಲೂಕು (2), ತಿ.ನರಸೀಪುರ (1), ಕೆ.ಆರ್.ನಗರ (1) ತಾಲ್ಲೂಕುಗಳು ನಂತರದ ಸ್ಥಾನದಲ್ಲಿವೆ. ಕಳೆದ ವರ್ಷ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 131 ದೂರುಗಳು ಬಂದಿದ್ದವು.

‘ಲಾಕ್‌ಡೌನ್‌ ಸಮಯದಲ್ಲೇ ಹೆಚ್ಚಳ’: ‘ಕಳೆದ ವರ್ಷವೂ ಲಾಕ್‌ಡೌನ್‌ ಸಮಯದಲ್ಲೇ ಬಾಲ್ಯವಿವಾಹ ಹೆಚ್ಚಾಗಿತ್ತು. ಈ ಬಾರಿಯೂ ಲಾಕ್‌ಡೌನ್‌ ಸಮಯದಲ್ಲೇ ಹೆಚ್ಚುತ್ತಿದೆ. ಬಹುತೇಕ ಪ್ರಕರಣಗಳನ್ನು ಈ ಬಾರಿ ತಡೆಯಲಾಗಿದೆ’ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪದ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆ ಇಲ್ಲದೇ ಬಾಲಕಿಯರು ಮನೆಯಲ್ಲಿರುವುದು ಒಂದು ಕಾರಣವಾದರೆ, ಲಾಕ್‌ಡೌನ್‌ ಸಮಯದಲ್ಲಿ ಮದುವೆ ಮಾಡಿದರೆ ನೆಂಟರಿಷ್ಟರನ್ನು ಕರೆಯುವ ಪ್ರಮೇಯ ಇಲ್ಲ. ಇದರಿಂದ ಖರ್ಚು ಕಡಿಮೆಯಾಗುತ್ತದೆ ಎಂಬುದು ಮತ್ತೊಂದು ಕಾರಣ. ಬಾಲ್ಯವಿವಾಹ ತಪ್ಪು ಎಂದು ಗೊತ್ತಿರುವವರೇ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.