ADVERTISEMENT

ಮೈಸೂರಿನಲ್ಲಿ 42 ಕೋವಿಡ್‌ ಪ್ರಕರಣ; 3 ಸಾವು

ಜಿಲ್ಲೆಯಲ್ಲಿ ಒಂದೇ ದಿನ 43 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 5:57 IST
Last Updated 13 ಜುಲೈ 2020, 5:57 IST

‌ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೆ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಭಾನುವಾರ ಹೊಸದಾಗಿ 42 ಮಂದಿಗೆ ಕೋವಿಡ್‌ 19 ದೃಢಪಟ್ಟಿದೆ. ಇದೇ ವೇಳೆ ಒಂದೇ ದಿನ 43 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆತಂಕದ ನಡುವೆಯೂ ಅಲ್ಪ ಸಮಾಧಾನಕ್ಕೆ ಕಾರಣವಾಗಿದೆ.

68 ವರ್ಷ, 69 ವರ್ಷ ಮತ್ತು 82 ವರ್ಷ ವಯಸ್ಸಿನ ಪುರುಷರು ನಿಗದಿತ ಆಸ್ಪತ್ರೆಗಳಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಎಂಟು ಮಂದಿ ಮೃತಪಟ್ಟಿದ್ದರು. ಇದರಿಂದ ಜನರಲ್ಲಿ ಆತಂಕ ಹೆಚ್ಚಿತ್ತು.

ADVERTISEMENT

ಜಿಲ್ಲೆಯಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 800ರ ಗಡಿ ದಾಟಿದೆ. ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳ ಪೈಕಿ ಮೈಸೂರು ಇದೀಗ ರಾಜ್ಯದಲ್ಲಿ 9ನೇ ಸ್ಥಾನದಲ್ಲಿದೆ.

ಹೊಸದಾಗಿ ಸೋಂಕು ದೃಢಪಟ್ಟವರಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ತೀವ್ರ ಉಸಿರಾಟದ ತೊಂದರೆ, ಶೀತ ಜ್ವರ ಮಾದರಿಯ ಅನಾರೋಗ್ಯದ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿರುವವರು, ಬೇರೆ ಜಿಲ್ಲೆಯಿಂದ ಬಂದವರು ಸೇರಿದ್ದಾರೆ.

43 ಮಂದಿ ಗುಣಮುಖ: ಭಾನುವಾರ 43 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 428ಕ್ಕೆ ಏರಿಕೆಯಾಗಿದೆ.

ಇದೀಗ 356 ಸಕ್ರಿಯ ಪ್ರಕರಣಗಳು ಇವೆ. 221 ಮಂದಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ, 35 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ 100 ಮಂದಿ ತಮ್ಮ ತಮ್ಮ ಮನೆಗಳಲ್ಲಿ ಐಸೋಲೇಷನ್‌ ಆಗಿದ್ದಾರೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.

1,848 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇದುವರೆಗೆ 27,821 ಮಂದಿಯನ್ನು ಪರೀಕ್ಷೆಗೆ ಒಳಗಪಡಿಸಿದ್ದು. 26,955 ವರದಿಗಳು ನೆಗೆಟಿವ್‌ ಬಂದಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.