ADVERTISEMENT

ಎನ್‌ಪಿಎಸ್ ರದ್ದತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 5:17 IST
Last Updated 8 ಜನವರಿ 2018, 5:17 IST

ಪಿರಿಯಾಪಟ್ಟಣ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್)ಯಿಂದ ಸರ್ಕಾರಿ ನೌಕರರ ಭವಿಷ್ಯ ಬೀದಿಗೆ ಬರುವ ಸಾಧ್ಯತೆ ಇರುವುದರಿಂದ ಕೂಡಲೇ ಈ ಯೋಜನೆ ರದ್ದುಪಡಿಸ ಬೇಕು ಎಂದು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ಒತ್ತಾಯಿಸಿದರು.

ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ತಾಲ್ಲೂಕು ಘಟಕ ಶನಿವಾರ ಏರ್ಪಡಿಸಿದ್ದ ನೌಕರರ ಜಾಗೃತಿ ಸಮಾವೇಶ ಮತ್ತು ವಿಚಾರಸಂಕಿರಣ ದಲ್ಲಿ ಅವರು ಮಾತನಾಡಿದರು.

2006ರಿಂದೀಚೆಗೆ ನೇಮಕಗೊಂಡ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಮರಣ ಶಾಸನವಾ ಗಿದೆ. ಹೀಗಾಗಿ, ಹಳೆ ವ್ಯವಸ್ಥೆ ಮುಂದುವರಿಸ ಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದರೂ ಉಳಿಸಿಕೊಳ್ಳುವುದು ಅಥವಾ ತಿರಸ್ಕರಿಸುವುದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಆದ್ದರಿಂದ ಎನ್‌ಪಿಎಸ್ ಕೈಬಿಡುವಂತೆ ಒತ್ತಾಯಿಸಿ ಜ.20ರಂದು ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಈ ಯೋಜನೆಗೆ ಒಳಪಡುವ 2 ಲಕ್ಷ ನೌಕರರು ಮತ್ತು ಇವರ ಆಶ್ರಯಲ್ಲಿ ಸುಮಾರು 16 ಲಕ್ಷ ಅವಲಂಬಿತರಿದ್ದಾರೆ. ನೌಕರರ ಕ್ಷೇಮ ಬಯಸುತ್ತೇವೆ ಎಂದು ಯಾವ ಪಕ್ಷ ಅಭಯ ನೀಡುತ್ತದೋ ಅದಕ್ಕೆ ಬೆಂಬಲ ನೀಡುವುದಾಗಿ ಬಹಿರಂಗವಾಗಿ ಘೋಷಿಸಲಾಗುವುದು ಎಂದು ತಿಳಿಸಿದರು.

ಶಾಸಕ ಕೆ.ವೆಂಕಟೇಶ್ ಮಾತನಾಡಿ, ನೌಕರರು ಸೇವೆಗೆ ಸೇರುವ ಹುಮ್ಮಸ್ಸಿನಲ್ಲಿ ಇಂಥ ಆಘಾತಕಾರಿ ಯೋಜನೆಗಳ ಬಗ್ಗೆ ಗಮನಿಸದೇ ಒಪ್ಪಂದಕ್ಕೆ ಸಹಿಹಾಕಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹೇಳಿದರು. ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿ ಈ ಯೋಜನೆ ರದ್ದುಪಡಿಸಲು ಕ್ರಮವಹಿಸುವಂತೆ ಮುಖ್ಯಮಂತ್ರಿ ಜತೆ ಸಮಾಲೋಚನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪುರಸಭಾ ಅಧ್ಯಕ್ಷ ವೇಣುಗೋಪಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಜಿ.ಸಿದ್ದಮಲ್ಲಪ್ಪ, ಎಚ್.ಆರ್.ರೂಪಾ, ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್.ರವಿ, ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ.ಪ್ರಕಾಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ನಿರೂಪಾ, ಸಂಘದ ಪದಾಧಿಕಾರಿಗಳಾದ ಡಾ.ಆರ್.ಬಿ.ಶೋಭಾ, ಆರ್.ಟಿ.ಚಂದ್ರು, ಎಚ್.ಡಿ.ಮಂಜುನಾಥ್, ಬಿ.ವಿ.ಕಿರಣ್‌ಕುಮಾರ್, ಸಿದ್ದೇಗೌಡ, ನಾಗಣ್ಣಗೌಡ, ಕೆಂಪರಾಜು, ಶ್ಯಾಮ್, ವಿನೋದ್‌ಕುಮಾರ್, ಗಾಯತ್ರಿ, ಪರಮಶಿವಯ್ಯ, ಶಮಿತಾ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.