ADVERTISEMENT

ಡಿ.ಬಿ.ಕುಪ್ಪೆಯಲ್ಲಿ 3 ಹುಲಿ ದರ್ಶನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 4:59 IST
Last Updated 9 ಜನವರಿ 2018, 4:59 IST

ಹುಣಸೂರು/ಗುಂಡ್ಲುಪೇಟೆ: ಇಲ್ಲಿನ ನಾಗರಹೊಳೆ, ಬಂಡೀಪುರ, ಬಿಳಿಗಿರಿ ರಂಗನಾಥ ರಕ್ಷಿತಾರಣ್ಯ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಹುಲಿಗಣತಿ ಆರಂಭವಾಗಿದ್ದು, ಸೋಮವಾರ ನಾಗರಹೊಳೆಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ 3 ಹುಲಿಗಳು ಗಣತಿದಾರರ ಕಣ್ಣಿಗೆ ಸೆರೆಯಾಗಿವೆ.

ರಾಷ್ಟ್ರೀಯ ಉದ್ಯಾನದ 63 ಬೀಟ್‌ಗಳಲ್ಲಿ 29 ಸ್ವಯಂಸೇವಕರು ಹಾಗೂ 80 ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಇವರಲ್ಲಿ ಪೊನ್ನಂಪೇಟೆಯ ಕೃಷಿ ಮತ್ತು ಅರಣ್ಯ ಮಹಾವಿದ್ಯಾಲಯದ 26 ವಿದ್ಯಾರ್ಥಿಗಳೂ ಸೇರಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ತಮಗೆ ನಿಗದಿಪಡಿಸಿದ ಬೀಟ್‌ಗಳತ್ತ ಗಣತಿದಾರರು ಅಗತ್ಯ ಪರಿಕರಗಳೊಂದಿಗೆ ಹೊರಟರು. ಹುಲಿಯ ನೇರ ವೀಕ್ಷಣೆಗೆ ಮೊದಲ ದಿನ ಆದ್ಯತೆ ನೀಡಲಾಗಿತ್ತು. ಉಳಿದೆಡೆ, ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ADVERTISEMENT

ಬಂಡೀಪುರದಲ್ಲಿ ದರ್ಶನ ನೀಡದ ಹುಲಿರಾಯ: ಬಂಡೀಪುರ ಉದ್ಯಾನ, ಬಿಳಿಗಿರಿ ರಂಗನಾಥ ರಕ್ಷಿತಾರಣ್ಯ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಗಣತಿದಾರರಿಗೆ ಹುಲಿ ಕಾಣಿಸಿಲ್ಲ.

ಬಂಡೀಪುರ ಹಾಗೂ ಬಿಆರ್‌ಟಿಯಲ್ಲಿ ಕೆಲವೆಡೆ ಹುಲಿಗಳ ಹೆಜ್ಜೆ ಗುರುತುಗಳು ಮಾತ್ರ ಕಾಣಿಸಿದವು. ಬಂಡೀಪುರ ಉದ್ಯಾನಕ್ಕೆ ಸೇರಿದ ಗೋಪಾಲಸ್ವಾಮಿ ಬೆಟ್ಟ, ಕುಂದಕೆರೆ, ಬಂಡೀಪುರ, ಮದ್ದೂರು, ಮೂಲೆಹೊಳೆ, ಓಂಕಾರ ವಲಯ ಸೇರಿದಂತೆ 12 ವಲಯಗಳಲ್ಲಿ ಬೆಳಿಗ್ಗೆ 6ರಿಂದ 10ರ ವರೆಗೆ ಹುಲಿ ಗಣತಿ ಕಾರ್ಯ ನಡೆಯಿತು.

ಗಣತಿ ವೇಳೆ ಕಾಣಿಸುವ ಗುರುತುಗಳನ್ನು ಮೊಬೈಲ್ ಡೇಟಾ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಯಾವ ಗುರುತು ಸಿಕ್ಕರೂ ಅವುಗಳ ಚಿತ್ರವನ್ನು ಆ್ಯಪ್‌ನಲ್ಲಿ ಕ್ಲಿಕ್‌ ಮಾಡಿ ಸ್ಥಳ ನಮೂದಿಸಿದರೆ ಅದು ಜಿಪಿಎಸ್ ಸಹಾಯದಿಂದ ನೇರವಾಗಿ ಕೇಂದ್ರಕ್ಕೆ ರವಾನೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಫಾರಿಯಲ್ಲಿ ಸಿಕ್ಕಿದ ಹುಲಿ: ಗಣತಿಯಲ್ಲಿ ಪಾಲ್ಗೊಂಡವರಿಗೆ ಹುಲಿ ಕಾಣಿಸಿಲ್ಲ. ಆದರೆ, ಬಂಡೀಪುರದ ಸುಬ್ಬರಾಯನಕಟ್ಟೆಯಲ್ಲಿ ಸಫಾರಿಗೆ ಹೋದವರಿಗೆ ಸಂಜೆ ಹುಲಿ ಕಾಣಿಸಿಕೊಂಡಿದೆ’ ಎಂದು ಸಫಾರಿ ವಾಹನ ಚಾಲಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.