ADVERTISEMENT

ಮುಖ್ಯಮಂತ್ರಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು

ಅಧಿಕಾರ ದುರುಪಯೋಗ, ಸರ್ಕಾರದ ಬೊಕ್ಕಸಕ್ಕೆ ನಷ್ಟ: ವಿಶ್ವನಾಥ್‌ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 9:40 IST
Last Updated 11 ಜನವರಿ 2018, 9:40 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣ ಯಾತ್ರೆ ನೆಪದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡುತ್ತಿದ್ದಾರೆ‌’ ಎಂದು ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಇಲ್ಲಿ ಬುಧವಾರ ಆರೋಪಿಸಿದರು.

‘ಸರ್ಕಾರದ ಖರ್ಚಿನಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆ, ಸಮಾರಂಭ ನಡೆಸಿ ಇಂತಹವರಿಗೆ ಮತ ಹಾಕಿ, ಇಂತಹವರನ್ನು ಸೋಲಿಸಿ ಎಂದು ಭಾಷಣ ಮಾಡುತ್ತಿದ್ದಾರೆ. ಪ್ರಚಾರಕ್ಕೆಂದೇ ಇದುವರೆಗೆ ₹ 1,300 ಕೋಟಿ ಖರ್ಚು ಮಾಡಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗುವ ಹಂತದಲ್ಲಿದೆ. ಅಧಿಕಾರ ದುರುಪಯೋಗ ಕುರಿತು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ದೂರು ನೀಡಿದ್ದೇನೆ. ಮುಖ್ಯ ಚುನಾವಣಾಧಿಕಾರಿಗೂ ಪತ್ರ ರವಾನಿಸಿದ್ದೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.‌

‘ಕುಂಭಕರ್ಣ ನಿದ್ರೆಯಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಚ್ಚರಗೊಂಡಿದೆ. ಹಳೆಯ ಯೋಜನೆಗಳಿಗೆ ಭಾಗ್ಯ ಎಂದು ಹೆಸರಿಟ್ಟು ಪ್ರಚಾರದಲ್ಲಿ ತೊಡಗಿದೆ. ನಾಲ್ಕೂವರೆ ವರ್ಷ ಏನು ಕೆಲಸ ಮಾಡಿದರು? ಮಾತೃಭಾಷೆ ಶಿಕ್ಷಣ, ಮಹದಾಯಿ, ಕಾವೇರಿ ನದಿ ನೀರಿನ ವಿವಾದ, ರೈತರ ಆತ್ಮಹತ್ಯೆ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಂಡರು’ ಎಂದು ಪ್ರಶ್ನಿಸಿದರು.

ADVERTISEMENT

‘ಎಲ್ಲಾ ಇಲಾಖೆಗಳಲ್ಲಿ ಅನಗತ್ಯವಾಗಿ ದುಂದುವೆಚ್ಚ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ 465 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು ಕಚೇರಿಯಲ್ಲಿ 15 ಸಿಬ್ಬಂದಿ ಇದ್ದಾರೆ. ಆದರೂ ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಇವರು ಯಾವ ಸೀಮೆಯ ಹಣಕಾಸು ಸಚಿವ? ಪೇಪರ್‌ ಮೇಲಷ್ಟೇ ನವಕರ್ನಾಟಕ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಹಣಕಾಸು ಪರಿಸ್ಥಿತಿ ದಿವಾಳಿ ಆಗಲಿದೆ’ ಎಂದು ಲೇವಡಿ ಮಾಡಿದರು.

‘ಸಿ–ವೋಟರ್‌ ಸಮೀಕ್ಷೆ ಎಂಬುದು ಕ್ಯಾಷ್‌ ಫಾರ್‌ ಸಮೀಕ್ಷೆ ಆಗಿದೆ. ಇಂಥ ಸಮೀಕ್ಷೆಗಳಿಗೆ ಯಾವುದೇ ಮಹತ್ವ ಇಲ್ಲ. ಜನರ ನಾಡಿಮಿಡಿತವೇ ಬೇರೆ ಇದೆ’ ಎಂದು ಹೇಳಿದರು.

‘ತವರು ಜಿಲ್ಲೆ ಮೈಸೂರಿಗೆ ಮುಖ್ಯಮಂತ್ರಿ ಏನೂ ಕೊಡುಗೆ ನೀಡಿಲ್ಲ. ಆಗಾಗ್ಗೆ ಹೆಲಿಕಾಪ‍್ಟರ್‌ನಲ್ಲಿ ಬಂದು ಮರೀಗೌಡ, ಮರೀಸ್ವಾಮಿ ಜೊತೆ ಮಾತನಾಡಿ ವಾಪಸ್‌ ಹೋಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.