ADVERTISEMENT

ಹೊಸ ಬಸ್ ನಿಲ್ದಾಣ; ನಿರೀಕ್ಷೆ ಹಲವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 4:17 IST
Last Updated 15 ಜನವರಿ 2018, 4:17 IST
ತಿ.ನರಸೀಪುರ ಪಟ್ಟಣದಲ್ಲಿರುವ ಹೈಟೆಕ್ ಬಸ್ ನಿಲ್ದಾಣ
ತಿ.ನರಸೀಪುರ ಪಟ್ಟಣದಲ್ಲಿರುವ ಹೈಟೆಕ್ ಬಸ್ ನಿಲ್ದಾಣ   

ತಿ.ನರಸೀಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 212ರ ಸಮೀಪ ₹6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಲೋಕಾ ರ್ಪಣೆಯಿಂದಾಗಿ ಪಟ್ಟಣ ಹಾಗೂ ತಾಲ್ಲೂಕಿನ ಜನರಲ್ಲಿ ಸಂತಸ ಮೂಡಿದೆ.

ಇಲ್ಲಿಂದ ವಿವಿಧ ಭಾಗಗಳಿಗೆ ಬಸ್ ಸೌಲಭ್ಯ ಇದೆ. ವ್ಯಾಪಾರ– ವಹಿವಾಟಿಗೆ ಅನುಕೂಲವಾಗುವಂತೆ ಹೋಟೆಲ್, ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಅಧಿಕಾರಿಗಳಿಗೆ ಕೊಠಡಿ, ಆಸನ ವ್ಯವಸ್ಥೆ 10 ಬಸ್ಸುಗಳಿಗೆ ಬಸ್ ವೇ ಸೌಲಭ್ಯ ಹಾಗೂ ಮಳಿಗೆ ನಿರ್ಮಿಸಲಾಗಿದೆ. ನೆಲದ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಬೇಕಿ ದ್ದು, ಎರಡನೇ ಹಂತದ ಅಭಿವೃದ್ಧಿಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ವ್ಯಾಪಾರ– ವಹಿವಾಟು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರ ಎನಿಸಿರುವ ತ್ರಿವೇಣಿ ಸಂಗಮ ಸಮೀಪ ಹೆದ್ದಾರಿಗೆ ಹೊಂದಿ ಕೊಂಡಂತೆ ಈ ನಿಲ್ದಾಣ ಇದೆ.

ADVERTISEMENT

ಇದರ ಆಸುಪಾಸು ಗುಂಜಾ ನರಸಿಂಹಸ್ವಾಮಿ, ಬಳ್ಳೇಶ್ವರ, ಅಗಸ್ತ್ಯೇಶ್ವರ ದೇಗುಲಗಳಿವೆ. ಇದು ಪ್ರಮುಖ ಹೆದ್ದಾರಿಯಾಗಿದ್ದು, ಕೇರಳ, ತಮಿಳುನಾಡಿನ ಪ್ರಮುಖ ವಾಣಿಜ್ಯ ನಗರಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ವ್ಯಾಪಾರ– ವಹಿವಾಟಿನಿಂದ ಆದಾಯ ನಿರೀಕ್ಷೆ ಸ್ಥಳೀಯ ವ್ಯಾಪಾರಿ ಗಳದ್ದು. ₹ 70 ಕೋಟಿ ವೆಚ್ಚದಲ್ಲಿ ನದಿ ತೀರದಲ್ಲಿ ಸುಸಜ್ಜಿತ ಸೋಪಾನ ಕಟ್ಟೆ, ಉದ್ಯಾನ ನಿರ್ಮಾಣ ಆಗಿರುವುದರಿಂದ ಸಮೀಪದಲ್ಲಿ ಬಸ್ ನಿಲ್ದಾಣ ಇರುವುದ ರಿಂದ ಪ್ರವಾಸಿಗರಿಗೆ ಬಂದು ಹೋಗಲು ತುಂಬಾ ಅನುಕೂಲಕರ ಪರಿಸ್ಥಿತಿ ಇದೆ.

ಅನೇಕ ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರಿಗೆ ಖಾಸಗಿ ಬಸ್ಸುಗಳು ಅನಿವಾರ್ಯವಾಗಿದ್ದವು. ಇತ್ತೀಚಿನ ಕೆಲ ವರ್ಷಗಳಿಂದ ಮೈಸೂರಿ ನಿಂದ ತಿ.ನರಸೀಪುರ ಮಾರ್ಗವಾಗಿ ಕೊಳ್ಳೇಗಾಲ, ಚಾಮರಾಜನಗರ, ತಮಿಳುನಾಡು, ಕೇರಳ ಕಡೆ ಬಸ್ಸು ಗಳು ಹೋಗುತ್ತಿವೆ.

ನಿಲ್ದಾಣ ಆಗಿರುವುದರಿಂದ ಬಸ್ ಸಂಖ್ಯೆ ಹೆಚ್ಚಲಿದೆ. ಹತ್ತಾರು ವರ್ಷ ಗಳಿಂದ ಬಸ್ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಬೇಡಿಕೆ ಇದ್ದು, ಡಿಪೊ ನಿರ್ಮಾಣವಾದ ನಂತರ ಹೆಚ್ಚಿನ ಸೌಲಭ್ಯ ದೊರೆಯುವ ನಿರೀಕ್ಷೆ ಇದೆ.

‘ಬಸ್ ನಿಲ್ದಾಣವಾಗಿರುವುದು ಬಹಳ ಸಂತಸ ತಂದಿದೆ. ಆದರೆ, ಖಾಸಗಿ ಬಸ್ ನಿಲ್ದಾಣ ದೂರವಿರುವುದರಿಂದ ಸರ್ಕಾರಿ ಬಸ್ಸುಗಳು ಅಲ್ಲಿಗೆ ಹೋಗಿ ಬಂದರೆ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ. ಇಲ್ಲದಿದ್ದಲ್ಲಿ ನಡೆದು ಹೋಗಬೇಕು ಅಥವಾ ಆಟೊಗಳಿಗೆ ಹಣ ನೀಡಬೇಕಾಗುತ್ತದೆ’ ಎಂದು ಸ್ಥಳೀಯ ಮಂಜುನಾಥ್ ಹೇಳಿದರು.

ತಪ್ಪಿದ ಕಿರಿಕಿರಿ: ತಿ.ನರಸೀಪುರದಿಂದ ಮೈಸೂರಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಅವರು ಗುಂಜಾನರಸಿಂಹಸ್ವಾಮಿ ದೇವಾಲ ಯದ ನಿಲ್ದಾಣದಲ್ಲಿ ನಿಂತು ಬಸ್ಸಿಗೆ ಕಾಯ ಬೇಕು. ಅನೇಕ ವೇಳೆ ಬಸ್ ನಿಲ್ಲಿಸದೇ ಕಿರಿಕಿರಿ ಆಗುತ್ತಿತ್ತು. ಆದರೆ, ಈಗ ನಿಲ್ದಾಣ ಆಗಿರುವುದರಿಂದ ಅನುಕೂಲವಾಗಿದೆ.

‘ಸಾರ್ವಜನಿಕರ ಆಶಯದಂತೆ ನಿರ್ಮಾಣವಾಗಿರುವ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು. ನಿರಂತರ ಬಸ್ ಸೌಲಭ್ಯ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆ ಇಲ್ಲದಂತೆ ನಿರ್ವಹಣೆ ಮಾಡಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರ ಜತೆ ಜನರಿಗೂ ಸೌಲಭ್ಯ ದೊರಕಿದಂತಾಗುತ್ತದೆ’ ಎಂಬುದು ಪ್ರಯಾಣಿಕ ರಮೇಶ್ ಅಭಿಪ್ರಾಯ.
***
ನೆಲಕ್ಕೆ ಕಾಂಕ್ರಿಟ್ ಹಾಕುವ ಕಾಮಗಾರಿ ಶೀಘ್ರ ಆರಂಭ ಆಗಲಿದೆ. ಸಂಚಾರ ಹಾಗೂ ಪ್ರಯಾಣಿಕರ ಅಗತ್ಯಗೆ ಅನುಗುಣವಾಗಿ ಸೌಲಭ್ಯಗಳು ದೊರಕಲಿವೆ.
ಈರೇಶ್, ಎಇಇ ಸಾರಿಗೆ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.