ADVERTISEMENT

‘ಕಸ ಸಂಗ್ರಹಿಸಲು ಅವಕಾಶ ನೀಡಿ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 6:33 IST
Last Updated 21 ಫೆಬ್ರುವರಿ 2018, 6:33 IST

ಕೆ.ಆರ್.ನಗರ: ‘ಹಲವು ವರ್ಷಗಳಿಂದ ಮನೆ ಮನೆ ಕಸ ಸಂಗ್ರಹಿಸುವ ಕೆಲಸ ಮಾಡಿ, ಅದರಿಂದ ಬರುವ ಅಲ್ಪ ಆದಾಯದಿಂದ ಜೀವನ ಸಾಗಿಸುತ್ತಿದ್ದೇವೆ. ಈಗ ನಮ್ಮನ್ನು ಇದ್ದಕ್ಕಿದ್ದ ಹಾಗೆ ಕೆಲಸಕ್ಕೆ ಬರಬೇಡಿ ಎಂದರೆ ನಾವು ಈಗ ಎಲ್ಲಿಗೆ ಹೋಗಬೇಕು’ ಎಂದು ತಳ್ಳುಗಾಡಿಗಳಲ್ಲಿ ಕಸ ಸಂಗ್ರಹಿಸುವ ಮಹಿಳೆಯರು ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್ ಅವರಲ್ಲಿ ಸೋಮವಾರ ತಮ್ಮ ಗೋಳನ್ನು ತೋಡಿಕೊಂಡರು.

‘ನಾಲ್ಕೈದು ವರ್ಷಗಳಿಂದ ಇಲ್ಲಿನ ಪೌರಕಾರ್ಮಿಕರ ಕಾಲೊನಿಯಲ್ಲಿ ವಾಸವಿರುವ ಸುಮಾರು 14ಕ್ಕೂ ಹೆಚ್ಚು ಮಹಿಳೆಯರು ಶ್ರೀದೇವಿ ಸ್ತ್ರೀ ಶಕ್ತಿ ಸಂಘ ಮತ್ತು ಓಂ ಶಕ್ತಿ ನಿರಂತರ ಉಳಿತಾಯ ಸಂಘ ಎಂದು ರಚಿಸಿಕೊಂಡಿದ್ದು, ಮನೆಗಳಲ್ಲಿ ಕಸ ಸಂಗ್ರಹಿಸಿದ್ದಕ್ಕೆ ಪ್ರತಿ ಮನೆಯವರು ಮಾಸಿಕ ₹10 ನೀಡುತ್ತಾರೆ. ಅದರಿಂದ ಜೀವನ ನಿರ್ವಹಣೆ ಮಾಡುತ್ತಿದ್ದೆವು. ಈಗ ಕಸ ಸಂಗ್ರಹ ಶುಲ್ಕವೆಂದು ಪುರಸಭೆಯೇ ನೇರವಾಗಿ ಮನೆಗಳಿಂದ ಶುಲ್ಕ ಸಂಗ್ರಹಿಸುತ್ತಿದ್ದು, ನಮಗೆ ತಿಂಗಳಿಗೆ ತಲಾ ₹2000 ನೀಡಲಾಗುತ್ತಿತ್ತು. ಈಗ ಕಸ ಸಂಗ್ರಹಿಸಲು ಬರಬೇಡಿ ಎಂದು ಸೂಚನೆ ನೀಡಲಾಗಿದೆ. ಅಲ್ಲದೇ 6 ತಿಂಗಳಿನಿಂದ ಸೇವಾಶುಲ್ಕವನ್ನು ನೀಡಿಲ್ಲ’ ಎಂದು ಅಲವತ್ತುಕೊಂಡರು.

ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ, 3ತಿಂಗಳ ಸೇವಾ ಶುಲ್ಕ ಬಾಕಿ ಇದೆ. ಕಸ ಸಂಗ್ರಹಿಸಲು ಅವರನ್ನು ನಾವು ನೇರವಾಗಿ ನೇಮಕ ಮಾಡಿಕೊಂಡಿಲ್ಲ. ಅಲ್ಲದೇ, ಗುತ್ತಿಗೆ ಮೂಲಕ ಯಾರಿಂದಲೂ ಕೆಲಸ ಮಾಡಿಸಬೇಡಿ ಎಂದು ಸರ್ಕಾರ ಆದೇಶಿಸಿದೆ. ಮುಂದೆ ಸರ್ಕಾರ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದರೆ ಅವರು ಅರ್ಜಿ ಹಾಕಬಹುದು ಎಂದು ಹೇಳಿದರು. ಮಹಾದೇವಿ, ಮೈಲಮ್ಮ, ವಸಂತಾ, ಗೌರಮ್ಮ, ರಾಚಮ್ಮ, ಚಂದ್ರಿಕಾ, ಜಯಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.