ADVERTISEMENT

ಮೈಸೂರು: ತ್ಯಾಜ್ಯ ತೆರವಿಗೆ ₹ 57 ಕೋಟಿ!

ಖಾಸಗಿ ಕಂಪನಿಗೆ ಟೆಂಡರ್‌ ನೀಡಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 12:57 IST
Last Updated 1 ಡಿಸೆಂಬರ್ 2022, 12:57 IST

ಮೈಸೂರು: ‘ಇಲ್ಲಿನ ವಿದ್ಯಾರಣ್ಯಪುರಂನ ಸೂಯೆಜ್‌ ಫಾರಂನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಲು ₹ 57 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರಪಾಲಿಕೆಯಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ಅನುದಾನ ದೊರೆಯಲಿದೆ. ಹೊಸದಾಗಿ ಡಿಪಿಆರ್‌ ತಯಾರಿಸಲಾಗಿದೆ. ಟೆಂಡರ್‌ ಪಡೆಯುವ ಕಂಪನಿಗೆ, ತ್ಯಾಜ್ಯ ತೆರವುಗೊಳಿಸಲು ಟನ್‌ಗೆ ಇಂತಿಷ್ಟೆಂದು ಹಣವನ್ನು ಕೊಡಬೇಕಾಗುತ್ತದೆ’ ಎಂದರು.

‘ಚಾಮುಂಡಿ ಬೆಟ್ಟಕ್ಕೆ ಪರ್ಯಾಯವಾಗಿ ಕಸದ ಗುಡ್ಡೆ ಬೆಳೆಯುತ್ತಲೇ ಇದೆ. ದಿನೇ ದಿನೇ ಸಂಗ್ರಹ ಪ್ರಮಾಣ ಏರುತ್ತಲೇ ಇದೆ. ಹೀಗಾಗಿ, ತ್ಯಾಜ್ಯವನ್ನು ತೆರವುಗೊಳಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ‘ಕಾರ್ಯಾದೇಶ ನೀಡಿದ ಮೇಲೆ 18 ತಿಂಗಳೊಳಗೆ ತ್ಯಾಜ್ಯವನ್ನು ತೆರವುಗೊಳಿಸಬೇಕಾಗುತ್ತದೆ. ನಗರದಲ್ಲಿ ನಿತ್ಯ 550 ಟನ್‌ನಿಂದ 600 ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಅಷ್ಟನ್ನೂ ಸಂಸ್ಕರಣೆ ಮಾಡುವುದು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಗ್ರಹ ಪ್ರಮಾಣ ಜಾಸ್ತಿಯಾಗಿದೆ. ಸೂಯೆಜ್‌ಫಾರಂ ಘಟಕದಲ್ಲಿ ಈಗಾಗಲೇ 6.50 ಲಕ್ಷ ಟನ್‌ ತ್ಯಾಜ್ಯ ಇದೆ’ ಎಂದು ಮಾಹಿತಿ ನೀಡಿದರು.

‘ಟೆಂಡರ್ ಪಡೆಯುವವರು, ತ್ಯಾಜ್ಯವನ್ನು ಗೊಬ್ಬರ, ಸಿಮೆಂಟ್, ಡಾಂಬರು ತಯಾರಿಕೆ ಮೊದಲಾದವುಗಳಿಗೆ ಬಳಸುತ್ತಾರೆ. ಸಂಗ್ರಹವಾಗಿರುವ ತ್ಯಾಜ್ಯದಲ್ಲಿ ಶೇ 20ರಷ್ಟು ಪ್ಲಾಸ್ಟಿಕ್ ಕಸವೇ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.