ADVERTISEMENT

ಮೈಸೂರು ಸೆಸ್ಕ್‌: 6,811 ಪರಿವರ್ತಕಗಳ ನಿರ್ವಹಣೆ

ಸೆಸ್ಕ್ ಎಸ್‌ಇ ಎಸ್.ನಾಗೇಶ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 12:43 IST
Last Updated 27 ಜುಲೈ 2022, 12:43 IST
ಎಲ್.ನಾಗೇಂದ್ರ
ಎಲ್.ನಾಗೇಂದ್ರ   

ಮೈಸೂರು: ‘ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ನಡೆಸಿದ ಅಭಿಯಾನದಲ್ಲಿ 6,811 ಪರಿವರ್ತಕಗಳನ್ನು ನಿರ್ವಹಿಸಲಾಗಿದೆ’ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಎಸ್.ನಾಗೇಶ್ ತಿಳಿಸಿದರು.

ಕೇಂದ್ರ ಇಂಧನ ಸಚಿವಾಲಯ, ಇಂಧನ ಇಲಾಖೆ ಮತ್ತು ಸೆಸ್ಕ್‌ ಸಹಯೋಗದಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ‘ಉಜ್ವಲ ಭಾರತ– ಉಜ್ವಲ ಭವಿಷ್ಯ– ವಿದ್ಯುತ್‌’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಎಂಟು ವರ್ಷಗಳಲ್ಲಿ ಐಪಿಡಿಎಸ್ ಯೋಜನೆಯಲ್ಲಿ ಮೈಸೂರು, ನಂಜನಗೂಡು, ತಿ.ನರಸೀಪುರ, ಬನ್ನೂರು, ಹುಣಸೂರು, ಎಚ್.ಡಿ.ಕೋಟೆ, ಸರಗೂರು, ಕೆ.ಆರ್.ನಗರ, ಪಿರಿಯಾಪಟ್ಟಣದಲ್ಲಿ ₹ 39 ಕೋಟಿ ವೆಚ್ಚದಲ್ಲಿ ವಿದ್ಯುತ್ ಜಾಲ ಸಧೃಡಗೊಳಿಸಲಾಗಿದೆ. ಡಿಡಿಯುಜಿಜೆ (ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ) ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಿಗೆ ₹ 67 ಕೋಟಿಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.

ADVERTISEMENT

21 ಗ್ರಾಮಗಳಲ್ಲಿ:

‘ಸಂಸದರ ಆದರ್ಶ ಗ್ರಾಮ ಯೋಜನೆಯಡಿ 21 ಗ್ರಾಮಗಳಲ್ಲಿ ₹ 2.84 ಕೋಟಿ ವೆಚ್ಚದಲ್ಲಿ ವಿದ್ಯುತ್ ಮಾರ್ಗ ಬಲಪಡಿಸುವುದು, ಪರಿವರ್ತಕ ಅಳವಡಿಕೆ, ರೀ–ಕಂಡಕ್ಟರಿಂಗ್ ಕಾಮಗಾರಿ ನಡೆಸಲಾಗಿದೆ. ‘ಬೆಳಕು’ ಯೋಜನೆಯಲ್ಲಿ ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ 21,987 ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ. ಅವುಗಳು ವಿದ್ಯುತ್‌ ಸಂಪರ್ಕ ರಹಿತವಾಗಿದ್ದವು’ ಎಂದು ಹೇಳಿದರು.

‘ಎಲೆಕ್ಟ್ರಿಕಲ್‌ ವಾಹನಗಳ ಬಳಕೆ ಉತ್ತೇಜಿಸುವ ಸಲುವಾಗಿ, ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 208 ಸ್ಥಳಗಳನ್ನು ಗುರುತಿಸಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದರು.

ಕ್ರಾಂತಿಕಾರಕ ಬದಲಾವಣೆ:

ಉದ್ಘಾಟಿಸಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ವಿದ್ಯುತ್ ಸಂಪರ್ಕ ಹೊಂದಿಲ್ಲದ ಮನೆಗಳಿಗೆ ‘ಬೆಳಕು’ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಒಂದೂವರೆ ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಿಂದೆ, ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಜನರು ಕಷ್ಟಪಡಬೇಕಾಗಿತ್ತು. ಆದರೆ, ಈಗ ಅರ್ಜಿ ಸಲ್ಲಿಸಿದ ವಾರದೊಳಗೆ ಅನುಕೂಲ ದೊರೆಯುತ್ತಿದೆ. ಪರಿವರ್ತಕ ಸಮಸ್ಯೆ ನಿವಾರಣೆಗೆ, ಹಿಂದೆ ಮೂರು ತಿಂಗಳು ಬೇಕಾಗುತ್ತಿತ್ತು. ಇದರಿಂದ ಜನರು ಪರದಾಡಬೇಕಾಗುತ್ತಿತ್ತು. ಆ ಸ್ಥಿತಿ ಈಗ ಇಲ್ಲ. ಕೂಡಲೇ ದುರಸ್ತಿ ಮಾಡಲಾಗುತ್ತಿದೆ ಅಥವಾ 24 ಗಂಟೆಯೊಳಗೆ ಹೊಸದನ್ನೇ ಅಳವಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದರು.

‘ಕೈಲಾಸಪುರಂ, ಮಂಜುನಾಥಪುರಂ, ಕುಕ್ಕರಹಳ್ಳಿ ಮೊದಲಾದ ಕಡೆಗಳಲ್ಲಿ ವಿದ್ಯುತ್‌ ರಹಿತ ಕುಟುಂಬಗಳಿದ್ದರೆ ಗುರುತಿಸಿ, 2–3 ತಿಂಗಳಲ್ಲಿ ಸಂಪರ್ಕ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.

ಕೇಂದ್ರ ಪವರ್ ಗ್ರಿಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಮಯ್, ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್‌ ಕೆ.ವಿ.ಉಮೇಶ್ ಚಂದ್ರ, ಜಿಲ್ಲಾ ಪಂಚಾಯಿತಿ ಆಧಿಕಾರಿ ಸುಮಿತ್ತಾ, ಎಇಇ ಎಸ್.ಶ್ರೀಧರ್, ಎಸ್.ಅನಿತಾ ಹಾಶಗೂಗೋಪಾಲ್ ಗಾಂವ್ಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.