ADVERTISEMENT

ಮೈಸೂರು ಜಿಲ್ಲೆಯಲ್ಲಿ ₹70 ಕೋಟಿ ಬೆಳೆನಷ್ಟ: ಶಾಸಕ ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 16:39 IST
Last Updated 12 ನವೆಂಬರ್ 2023, 16:39 IST
ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದ ಪ್ರೇಮಮ್ಮ ಎಂಬುವವರ ಜಮೀನಿಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದರು.
ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದ ಪ್ರೇಮಮ್ಮ ಎಂಬುವವರ ಜಮೀನಿಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದರು.   

ಬಿಳಿಕೆರೆ: ‘ಜಿಲ್ಲೆಯಲ್ಲಿ ನಾಲ್ಕು ತಿಂಗಳುಗಳ ಹಿಂದೆ ಬಿತ್ತಿದ್ದ ಬೆಳೆ ರೈತರ ಕೈಸೇರಿಲ್ಲ. ನೀರಿಲ್ಲದೆ ಕೆಲವು ರೈತರು ಕೃಷಿ ಮಾಡಿಲ್ಲ.1,49,296 ರೈತರಿಗೆ ಅಂದಾಜು ₹70 ಕೋಟಿ  ಬೆಳೆನಷ್ಟವಾಗಿದೆ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಹೋಬಳಿಯ ಬೆಟ್ಟದೂರು ಗ್ರಾಮದ ಪ್ರೇಮಮ್ಮ  ಎಂಬುವವರ ಜಮೀನಿಗೆ ಭಾನುವಾರ ಭೇಟಿ ನೀಡಿದ ಜೆಡಿಎಸ್ ಜಿಲ್ಲಾ ಘಟಕದ ತಂಡ ಬರ ಪರಿಶೀಲನೆ ನಡೆಸಿತು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ, ಕೆರೆಗಳಿಗೆ ನೀರು ತುಂಬಿಸಿಲ್ಲ. ಸರ್ಕಾರಿ ಅಧಿಕಾರಿಗಳು ಜಮೀನಿಗಳಿಗೆ ಭೇಟಿ ನೀಡಿ ವಾಸ್ತವ ಪರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ . ರೈತರು ಪರಿತಪಿಸುವಂತಾಗಿದೆ. ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು’ ಎಂದು ಜಿ.ಟಿ.ದೇವೇಗೌಡ ಒತ್ತಾಯಿಸಿದರು.

'ಮುಂಗಾರು ಮಳೆ ಸಮಪರ್ಕವಾಗಿ ಆಗದೆ ದ್ವಿದಳ ಧಾನ್ಯ, ರಾಗಿ, ಭತ್ತ, ಮುಸುಕಿನ ಜೋಳ, ಹತ್ತಿ ಮುಂತಾದ  ಬೆಳೆ ರೈತರ ಕೈ ಸೇರದೆ  ಅವರು ಕಂಗಲಾಗಿದ್ದಾರೆ. ಪಂಪ್‌ಸೆಟ್ ಹೊಂದಿರುವ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದೆ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರರ ತಕ್ಷಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಅಡ್ಡೆ ಮಾಡಿದರೆ, ಮುಂದಿನ ತಿಂಗಳಿಂದ ಪ್ರಾರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಜೆಡಿಎಸ್ ಬಿಜೆಪಿ ಹಾಗೂ  ರೈತಪರ ಕಾಳಜಿಯುಳ್ಳ ಕಾಂಗ್ರೆಸ್ ಶಾಸಕರು ಸೇರಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ADVERTISEMENT

‘ಮೈಸೂರು ಜಿಲ್ಲೆಯಲ್ಲಿ ಈ ವರ್ಷ 3,70,211 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನ ಅನಾವೃಷ್ಟಿಯಿಂದ 82,660.75 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿ, 1,49,296 ರೈತರಿಗೆ ಅಂದಾಜು ₹70 ಕೋಟಿ  ಬೆಳೆನಷ್ಟವಾಗಿದೆ. ವಾಡಿಕೆ  ಶೇಕಡ 18 ರಷ್ಟು ಮಳೆ ಕಡಿಮೆ ಸುರಿದಿದೆ. ರೈತರ ಪಂಪ್ ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್‌  ಪೂರೈಕೆಯಾಗದೆ ತೊಂದರೆಯಾಗಿದೆ.  ಬೆಳೆ ಒಣಗಿ ರೈತರು ಸಾಲದ ಸುಳಿಯಲ್ಲಿ ಮತ್ತೊಮ್ಮೆ ಸಿಲುಕಿದ್ದಾರೆ’ ಎಂದು ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು.

ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಪಿರಿಯಾಪಟ್ಟಣದ‌ ಮಾಜಿ ಶಾಸಕ ಮಹದೇವ್, ತಿ.ನರಸೀಪುರ ಮಾಜಿ ಶಾಸಕ ಅಶ್ವಿನ್ ಕುಮಾರ್ ಇದ್ದರು.

‘ಹಣ ನೀಡುತ್ತಿಲ್ಲ’

‘ಜಿಲ್ಲೆಯಲ್ಲಿ ಸರ್ಕಾರದ ಅನುದಾನ ವರುಣಾ ತಿ. ನರಸೀಪುರ ಮತ್ತು ನಂಜನಗೂಡಿಗಷ್ಟೆ ಸೀಮಿತವಾಗಿದೆ. ರಸ್ತೆಯ ಗುಂಡಿಗಳನ್ನು ಮುಚ್ಚಲು ಹಣ ನೀಡುತ್ತಿಲ್ಲ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ನಾವು ಜನರಿಗೆ ಏನು ಉತ್ತರ ನೀಡಬೇಕು’ ಎಂದು ಹುಣಸೂರು ಶಾಸಕ ಹರೀಶ್ ಗೌಡ ಪ್ರಶ್ನಿಸಿದರು.

‘ಪ್ರಚಾರದ ಹಣ ರೈತರಿಗೆ ಕೊಡಿ’

'ಸರ್ಕಾರ ಜಾಹೀರಾತಿಗೆ ಖರ್ಚು ಮಾಡುವ ಹಣವನ್ನು ರೈತರ ಪರಿಹಾರಕ್ಕೆ ಬಳಸಬೇಕು. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಈ ರೀತಿ ಪರಿಸ್ಥಿತಿ ಇರಬೇಕಾದರೆ ರಾಜ್ಯದ ಇತರೆಡೆ ರೈತರ ಸಮಸ್ಯೆ ಇನ್ನೂ ಗಂಭೀರವಾಗಿದೆ' ಎಂದು ಮುಖಂಡ ಸಾ.ರಾ.ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.