ADVERTISEMENT

ಮೈಸೂರು | ಅದ್ದೂರಿ ದೀಪಾವಳಿ ಆಚರಣೆ: ಗಮನ ಸೆಳೆದ ದನಗಳ ಓಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 2:53 IST
Last Updated 24 ಅಕ್ಟೋಬರ್ 2025, 2:53 IST
ಹಂಪಾಪುರ ಹೊರವಲಯದ ಬೆಳಗನಹಳ್ಳಿ ಗ್ರಾಮದಲ್ಲಿ ದೀಪಾವಳಿ ಅಂಗವಾಗಿ ಎತ್ತಿನ ಗಾಡಿ ಓಟ ನಡೆಯಿತು
ಹಂಪಾಪುರ ಹೊರವಲಯದ ಬೆಳಗನಹಳ್ಳಿ ಗ್ರಾಮದಲ್ಲಿ ದೀಪಾವಳಿ ಅಂಗವಾಗಿ ಎತ್ತಿನ ಗಾಡಿ ಓಟ ನಡೆಯಿತು   

ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ದೀಪಾವಳಿ ಆಚರಣೆ ಮಾಡಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ದೀಪಾವಳಿ ಹಬ್ಬಕ್ಕೆ ಕಳೆದ ಒಂದು ವಾರದಿಂದಲೂ ಗ್ರಾಮಸ್ಥರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಬೆಳಿಗ್ಗೆ ಐದು ಗಂಟೆಗೆ ದನಕರುಗಳನ್ನು ತಮ್ಮ ತಮ್ಮ ಜಮೀನಿಗೆ ಹೊಡೆದುಕೊಂಡು ಹೋಗಿ ಮೇವು ಮೇಯಿಸಿಕೊಂಡು ಬಂದು, ಅವುಗಳಿಗೆ ಸ್ನಾನ ಮಾಡಿಸಿ, ಸೇವಂತಿಗೆ ಮತ್ತು ಇತರೆ ಹೂಗಳನ್ನು ಬಳಸಿ, ಬಲೂನ್ ಕಟ್ಟಿ, ಕೊಂಬುಗಳಿಗೆ ಮತ್ತು ಮೈ ಮೇಲೆ ರಾಸಾಯನಿಕ ಮುಕ್ತ ಬಣ್ಣಗಳಿಂದ ಸಿಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಓಡಾಡಿಸಿ ಸಂಭ್ರಮಿಸಿದರು. ಮಕ್ಕಳು ವಿಶೇಷ ಧಿರಿಸುಗಳಿಂದ ಕಂಗೊಳಿಸಿದರು. ಪಟಾಕಿ ಹೊಡೆದು ನಲಿದರು.

ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ಪ್ರಯುಕ್ತ ಎತ್ತಿನಗಾಡಿ ಓಟ, ದನಗಳ ಓಟ ಅದ್ದೂರಿಯಾಗಿ ನಡೆಯಿತು. ಐದಕ್ಕೂ ಹೆಚ್ಚು ಎತ್ತಿನ ಗಾಡಿಗಳು ಓಟದಲ್ಲಿ ಪಾಲ್ಗೊಂಡು ನೋಡುಗರಿಗೆ ಹಬ್ಬದ ಕಳೆ ನೀಡಿದವು. ನೂರಾರು ಜನ ನೋಡಿ ಕಣ್ತುಂಬಿಕೊಂಡರು. ಹಸುಗಳಿಗೆ ಜನರಿಗೆ ಯಾವುದೇ ತೊಂದರೆ ಆಗದಂತೆ ಎತ್ತನಗಾಡಿ ಓಟವು ಅಚ್ಚುಕಟ್ಟಾಗಿ ನಡೆಯಿತು.

ADVERTISEMENT

ಓಟವು ತಡವಾದರೂ ಸಹ ಜನರು ಬಹಳ ಹುಮ್ಮಸಿನಿಂದ ಎತ್ತಿನ ಗಾಡಿ ಓಟವನ್ನು ನೋಡಬೇಕೆಂದು ಕಾದಿದ್ದರು. ಅವರಿಗೆ ನಿರಾಸೆಯಾಗದಂತೆ ಎತ್ತಿನ ಗಾಡಿಗಳು ಆಗಮಿಸಿ ನೋಡುಗರಿಗೆ ಮನರಂಜನೆ ನೀಡಿದವು. ರಾತ್ರಿಯಾಗುತ್ತಿದ್ದಂತೆ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.