ADVERTISEMENT

ಮೈಸೂರು: ಮೋದಿ ಹಾಡು ರಚಿಸಿದ ಯುವಕನಿಗೆ ಹಲ್ಲೆ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:27 IST
Last Updated 19 ಏಪ್ರಿಲ್ 2024, 16:27 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಮೈಸೂರು: ನಗರದ ಗನ್‌ಹೌಸ್‌ ಆವರಣದಲ್ಲಿ ಮೋದಿ ಕುರಿತ ಹಾಡಿನ ವಿಡಿಯೊ ತೋರಿಸಿದ್ದಕ್ಕಾಗಿ, ಮೆಲ್ಲಹಳ್ಳಿ ನಿವಾಸಿ ರೋಹಿತ್‌ ಅವರ ಮೇಲೆ ಮುಸ್ಲಿಂ ಸಮುದಾಯದ ಐವರು ಯುವಕರು ಹಲ್ಲೆ ನಡೆಸಿದ ಬಗ್ಗೆ ನಜರ್‌ಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಲೀಂ, ಜಾವೀದ್‌, ಪಾಷಾ ಸಹಿತ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ರೋಹಿತ್‌ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಏ.14ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದದಲ್ಲಿ ನರೇಂದ್ರ ಮೋದಿ ಕುರಿತು ಹಾಡು ರಚಿಸಿದ್ದರು. ಅದನ್ನು ‘ಆರ್‌.ಆರ್‌ ಫಿಲಂ ಕಂಪನಿ’ ಹೆಸರಿನ ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಪ್ರಕಟಿಸಿದ್ದರು. ಶುಕ್ರವಾರ ಮಧ್ಯಾಹ್ನ ಸರ್ಕಾರಿ ವಸತಿಗೃಹ ಆವರಣದ ಬಳಿ ನಿಂತಿದ್ದ ಅಪರಿಚಿತರೊಬ್ಬರಿಗೆ ತಮ್ಮ ಹಾಡಿನ ಬಗ್ಗೆ ತಿಳಿಸಿ, ಚಾನೆಲ್‌ ಚಂದಾದಾರರಾಗುವಂತೆ (ಸಬ್‌ಸ್ಕ್ರೈಬ್‌) ಕೇಳಿಕೊಂಡರು ಎನ್ನಲಾಗಿದೆ.

ADVERTISEMENT

‘ಅಪರಿಚಿತ ವ್ಯಕ್ತಿ ತಮ್ಮ ಸ್ನೇಹಿತರಿಗೂ ಈ ಹಾಡನ್ನು ಕೇಳಿಸೋಣವೆಂದು ಕರೆದೊಯ್ದರು. ಅಲ್ಲಿದ್ದ ಯುವಕರು, ನೀನು ಮೋದಿ ಹಾಡು ಮಾಡುತ್ತೀಯಾ ಎಂದು ಪ್ರಶ್ನಿಸಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಲು ಒತ್ತಾಯಿಸಿದರು. ಅದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿದ್ದು, ಸಿಗರೇಟ್‌ನಿಂದ ಸುಟ್ಟು, ಮದ್ಯವನ್ನೂ ಸುರಿದು, ಬಿಯರ್‌ ಬಾಟಲಿಯಿಂದ ಕುಯ್ದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ರೋಹಿತ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ, ಸ್ಥಳ ಮಹಜರು ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.