ADVERTISEMENT

ಪಕ್ಷಿಪ್ರೇಮ ತೆರೆದಿಟ್ಟ ಜಿಲ್ಲಾಧಿಕಾರಿ

ಚಾಮರಾಜೇಂದ್ರ ಮೃಗಾಲಯದಲ್ಲಿ ಪಕ್ಷಿ ಉತ್ಸವ ಉದ್ಘಾಟಿಸಿದ ಅಭಿರಾಮ್‌ ಜಿ.ಶಂಕರ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 14:07 IST
Last Updated 28 ಡಿಸೆಂಬರ್ 2018, 14:07 IST
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಶುಕ್ರವಾರ ಆರಂಭವಾದ ಪಕ್ಷಿ ವೀಕ್ಷಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಚಾಲನೆ ನೀಡಿದರು. ಮೈಸೂರು ನೇಚರ್ ಕ್ಲಬ್‌ ಸಂಸ್ಥಾಪಕ ಶಿವಪ್ರಕಾಶ್, ಮೃಗಾಲಯದ ಉಪನಿರ್ದೇಶಕ ಎಚ್.ಪಿ.ಮಂಜುನಾಥ್, ಮೈಸೂರು ಉಪವಿಭಾಗದ ಆರೋಗ್ಯಾಧಿಕಾರಿ ಸಿದ್ದರಾಮಪ್ಪ, ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ ಇದ್ದಾರೆ
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಶುಕ್ರವಾರ ಆರಂಭವಾದ ಪಕ್ಷಿ ವೀಕ್ಷಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಚಾಲನೆ ನೀಡಿದರು. ಮೈಸೂರು ನೇಚರ್ ಕ್ಲಬ್‌ ಸಂಸ್ಥಾಪಕ ಶಿವಪ್ರಕಾಶ್, ಮೃಗಾಲಯದ ಉಪನಿರ್ದೇಶಕ ಎಚ್.ಪಿ.ಮಂಜುನಾಥ್, ಮೈಸೂರು ಉಪವಿಭಾಗದ ಆರೋಗ್ಯಾಧಿಕಾರಿ ಸಿದ್ದರಾಮಪ್ಪ, ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ ಇದ್ದಾರೆ   

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮಾಗಿ ಉತ್ಸವ ಅಂಗವಾಗಿ ಶುಕ್ರವಾರ ಆರಂಭವಾದ ಪಕ್ಷಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಮ್ಮ ಪಕ್ಷಿ ಜ್ಞಾನವನ್ನು ತೆರೆದಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಹಮ್ಮಿಕೊಂಡಿರುವ ಪಕ್ಷಿ ಉತ್ಸವದ ಉದ್ಘಾಟನಾ ಸಮಾರಂಭ ವಿಶೇಷವಾಗಿತ್ತು. ಅಭಿರಾಂ ಜಿ.ಶಂಕರ್ ಅವರು ಪಕ್ಷಿಗಳನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಿ ಪಕ್ಷಿ ಪ್ರೇಮಿಗಳ ಮನಗೆದ್ದರು. ತಾವು ವಿವಿಧೆಡೆ ಕ್ಲಿಕ್ಕಿಸಿರುವ ಹಕ್ಕಿಗಳ ಫೋಟೊಗಳನ್ನು ಪ್ರದರ್ಶಿಸಿ ವೈಜ್ಞಾನಿಕ ಮಾಹಿತಿಯನ್ನೂ ತಿಳಿಸಿಕೊಟ್ಟರು.

ಪಕ್ಷಿ ವೀಕ್ಷಣೆ ಮನೆಯಂಗಳದಲ್ಲೇ:‘ಪಕ್ಷಿ ವೀಕ್ಷಣೆಗೆ ಕಾಡಿಗೇ ಹೋಗಬೇಕೆಂದೇನೂ ಇಲ್ಲ. ತಾವು ಕುಳಿತಲ್ಲೇ ಪಕ್ಷಿಗಳನ್ನು ಕಾಣಬಹುದು. ಚುರುಕು ಕಣ್ಣು, ಪ್ರಕೃತಿ ಪ್ರೀತಿ ಇದ್ದಲ್ಲಿ ಸಾಕು. ಪಕ್ಷಿಗಳು ಕಾಣಲು ಶುರುವಾಗುತ್ತವೆ. ಮನೆಯ ಅಂಗಳದಲ್ಲೇ ಸಾಕಷ್ಟು ಪಕ್ಷಿಗಳು ಸಿಗುತ್ತವೆ. ಆದರೆ, ಅವಕ್ಕೆ ನಾವು ತೊಂದರೆ ನೀಡಬಾರದು. ಶಾಂತವಾಗಿ ಕುಳಿತು ತದೇಕಚಿತ್ತದಿಂದ ವೀಕ್ಷಿಸಿದಲ್ಲಿ ಪಕ್ಷಿಗಳ ಲೋಕವೇ ತೆರೆದುಕೊಳ್ಳುತ್ತದೆ’ ಎಂದು ಅವರು ಪಕ್ಷಿ ವೀಕ್ಷಣೆಗೆ ಆಸಕ್ತಿಯುಳ್ಳವರಿಗೆ ಮಾಹಿತಿ ನೀಡಿದರು.

ADVERTISEMENT

ಪಕ್ಷಿಗಳ ಫೋಟೊ ಕ್ಲಿಕ್ಕಿಸಬೇಕಾದರೆ ಅವುಗಳ ವಾಸತಾಣಕ್ಕೆ ತೊಂದರೆ ಮಾಡಬಾರದು. ಕೆಲವು ಪಕ್ಷಿಗಳು ಸಾವಿರಾರು ಕಿಲೋಮೀಟರ್ ದೂರದಿಂದ ಹಾರಿಬಂದು ಮರಿಮಾಡಿರುತ್ತವೆ. ಅವಕ್ಕೆ ತೊಂದರೆ ನೀಡಿದರೆ ಅವುಗಳ ಸಂತಾನವೇ ನಾಶವಾಗುವ ಅಪಾಯವಿರುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಹಕ್ಕಿಗಳ ಧ್ವನಿಯ ಧ್ವನಿಮುದ್ರಿಕೆ ಹಾಕಿದ ಅಭಿರಾಮ್, ಪ್ರೇಕ್ಷಕರಿಗೆ ಗುರಿತಿಸುವಂತೆ ಸವಾಲು ಹಾಕಿದರು. ಉತ್ತರಿಸಿದವರಿಗೆ ಚಾಕೋಲೆಟ್‌ ಬಹುಮಾನ ನೀಡಿದರು. ಗುಬ್ಬಚ್ಚಿ, ಗಿಳಿ, ಕೆಂಬೂತ, ನವಿಲು, ಕುಟ್ರಕಿ, ಬುಲ್‌ಬುಲ್ ಮುಂತಾದ ಪಕ್ಷಿಗಳ ಧ್ವನಿಯನ್ನು ಆಲಿಸುವ ಸದಾವಕಾಶ ನಾಗರಿಕರಿಗೆ ದೊರಕಿತು.

ಮೈಸೂರು ನೇಚರ್ ಕ್ಲಬ್‌ ಸಂಸ್ಥಾಪಕ ಶಿವಪ್ರಕಾಶ್, ಮೃಗಾಲಯದ ಉಪನಿರ್ದೇಶಕ ಎಚ್.ಪಿ.ಮಂಜುನಾಥ್, ಮೈಸೂರು ಉಪವಿಭಾಗದ ಆರೋಗ್ಯಾಧಿಕಾರಿ ಸಿದ್ದರಾಮಪ್ಪ, ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ ಭಾಗವಹಿಸಿದ್ದರು

6 ತಂಡ, 106 ಮಂದಿಯಿಂದ ವೀಕ್ಷಣೆ
ಎರಡು ದಿನಗಳ ಪಕ್ಷಿ ವೀಕ್ಷಣೆಗೆ 6 ತಂಡಗಳನ್ನು ರಚಿಸಲಾಗಿದ್ದು, 106 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ತಂಡಗಳನ್ನು ಕಾರಂಜಿ ಕೆರೆ, ಲಿಂಗಾಂಬುದಿ ಪಾಳ್ಯ, ಹೆಬ್ಬಾಳು ಕೆರೆ, ಲಿಂಗಾಂಬುದಿ ಕೆರೆ, ಗಿರಿ ಬೆಟ್ಟದ ಕೆರೆ, ವರಕೋಡು ಕರೆಗೆ ಕರೆದೊಯ್ಯಲಾಗುತ್ತದೆ.

ಶನಿವಾರ ಬೆಳಿಗ್ಗೆ ಮೃಗಾಲಯದಲ್ಲಿ ಸುಹೇಲ್ ಖ್ವಾಡರ್ ಅವರು ‘ನಾಗರಿಕರ ವಿಮಾನದ ಮೂಲಕ ಪಕ್ಷಿಗಳ ಬಗ್ಗೆ ಅರಿಯುವಿಕೆ’ ಕುರಿತು, ಬಿ.ಆರ್.ಶೇಷಗಿರಿ ಅವರು ‘ಮೈಸೂರು ಪ್ರಾಂತ್ಯದಲ್ಲಿ ವಲಸೆ ಹಕ್ಕಿಗಳ ಪ್ರಬೇಧಗಳು’ ಕುರಿತು, ಎ.ಶಿವಪ್ರಕಾಶ್ ಅವರು ‘ಮೈಸೂರು ಬರ್ಡ್ಸ್ ಅಟ್ಲಾಸ್’ ಕುರಿತು ಉಪನ್ಯಾಸ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.