ADVERTISEMENT

ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ: ಡಾ.ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:12 IST
Last Updated 31 ಜುಲೈ 2025, 5:12 IST
ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ   

ಮೈಸೂರು: ‘ಜವಾಬ್ದಾರಿಯಿಂದ ಕೆಲಸ ಮಾಡದವರು ಹಾಗೂ ಸರ್ಕಾರ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವರುಣ ಕ್ಷೇತ್ರದ ಮಾಕನಹುಂಡಿ, ಕೂಡನಹಳ್ಳಿ, ಕೋಚನಹಳ್ಳಿ, ಬಸಳ್ಳಿಹುಂಡಿ, ಸೋಮೇಶ್ವರಪುರ, ಕುಂಬ್ರಳ್ಳಿಮಠ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

‘ಮಾಕನಹುಂಡಿ ಗ್ರಾಮದಲ್ಲಿ ರಸ್ತೆಯ ಇಂಟರ್‌ಲಾಕ್ ಕಾಮಗಾರಿ ಕಳಪೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ, ರಸ್ತೆಗಳೆಲ್ಲಾ ಹಾಳಾಗಿವೆ. ವರುಣ ನಾಲೆ ಪೋಲಾಗುತ್ತಿದ್ದು 10 ಎಕರೆ ಭೂಮಿ ಮುಳುಗಡೆಯಾಗಿವೆ. ದಳವಾಯಿಕೆರೆ ಎಡದಂಡೆ ನಾಲೆ ಸಮಸ್ಯೆಯಾಗಿ ರೈತರಿಗೆ ತೊಂದರೆಯಾಗಿದೆ. ಜಮೀನಿನಲ್ಲಿ ಹೈಟೆನ್ಷನ್‌ ಮಾರ್ಗ ಹಾದು ಹೋಗುತ್ತಿದೆ. ಪೌತಿ ಖಾತೆ ಮಾಡಿಸಿಕೊಡಿ’ ಎಂಬಿತ್ಯಾದಿ ಒತ್ತಾಯ ಜನರಿಂದ ಕೇಳಿಬಂತು.

ADVERTISEMENT

ಕೂಡನಹಳ್ಳಿಯಲ್ಲಿ ಪರಿಶಿಷ್ಟ ಪಂಗಡದವರ ಆಶ್ರಯಕ್ಕೆ ಜಮೀನು ಮಂಜೂರು ಮಾಡಿಸಿಕೊಡಿ. ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ 2 ಗುಂಟೆ ಜಾಗ ಕೊಡಿಸಿಕೊಡಿ ಎಂಬ ಮನವಿ ಬಂತು.

ಸ್ಪಂದಿಸಿದ ಯತೀಂದ್ರ ಅವರು, ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಮತಾ ಟ್ರಸ್ಟ್ ವತಿಯಿಂದ ರಾಕೇಶ್ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ನೀಡಲಾಗಿದೆ. ನನ್ನ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದರು.

ತಹಶೀಲ್ದಾರ್‌ ಮಹೇಶ್‌ಕುಮಾರ್, ಇಒ ಕೃಷ್ಣ, ಬಿಇಒ ಪ್ರಕಾಶ್, ಸಿಡಿಪಿಒ ತಿಬ್ಬಯ್ಯ, ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ, ಕನಕ ಸಂಘದ ಅಧ್ಯಕ್ಷ ಬಿ. ರವಿ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ, ಎಂ.ಟಿ. ರವಿಕುಮಾರ್, ಜಿ.ಕೆ. ಬಸವಣ್ಣ, ಗುರುಸ್ವಾಮಿ, ಕೆ. ಹೆಬ್ಬಾಳೇಗೌಡ, ಅಹಿಂದ ಜವರಪ್ಪ, ಚಂದ್ರಶೇಖರ್, ಶಿವು, ರವಿಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.