ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ‘ದುಂಡುಮೇಜಿನ ಸಭೆ’ ನಿರ್ಣಯಿಸಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ವೇದಿಕೆಯು ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹುನ್ನಾರ ಖಂಡಿಸಿ’ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಪ್ರಗತಿಪರರು ಒಕ್ಕೊರಲ ನಿರ್ಧಾರ ಕೈಗೊಂಡರು.
ಲೇಖಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ‘ಹಿಂದುಳಿದ ವರ್ಗದವರಾದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಕೋಮುವಾದಿ ಶಕ್ತಿಗಳಿಗೆ ಸಹಿಸಲಾಗುತ್ತಿಲ್ಲ. ಆಡಳಿತಾವಧಿಯಲ್ಲಿ ಯಾವುದೇ ಆಪಾದನೆಗಳಿಲ್ಲ. ಹೊಟ್ಟೆಕಿಚ್ಚಿನಿಂದ ಇದೀಗ ಸತ್ವ, ಆಧಾರಗಳಿಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.
‘ಐದು ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಾಗಿದೆ. ಹೀಗಾಗಿಯೇ ಅಧಿಕಾರದಿಂದ ಕೆಳಗಿಸಲು ಸಂಚು ನಡೆದಿದೆ. ಇಡೀ ರಾಜ್ಯದ ಜನರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ. ಯಾವುದು ಸುಳ್ಳು, ಯಾವುದು ಸತ್ಯ ಎಂಬುದು ಜನರಿಗೆ ಗೊತ್ತಿದೆ. ಸಂವಿಧಾನ ರಕ್ಷಿಸುವ ನಾಯಕತ್ವಕ್ಕೆ ಒಗ್ಗಟ್ಟಾಗಿ ಬೆಂಬಲ ನೀಡಿದ್ದಾರೆ’ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ‘ಎಲ್ಲ ಪಕ್ಷಗಳ ಮುಖಂಡರೂ ಮುಡಾ ನಿವೇಶನ ಹೊಂದಿದ್ದಾರೆ. ಕಾನೂನುಬದ್ಧವಾಗಿಯೇ ಸಿದ್ದರಾಮಯ್ಯ ಅವರ ಪತ್ನಿಯ ಜಮೀನಿಗೆ ಪರ್ಯಾಯವಾಗಿ ನಿವೇಶನ ನೀಡಲಾಗಿದೆ. ಸಿದ್ದರಾಮಯ್ಯ ದಲಿತ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿರುವುದನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ’ ಎಂದು ದೂರಿದರು.
‘ಬಿಜೆಪಿ ಆಡಳಿತಾವಧಿಯಲ್ಲೇ ‘50:50’ ಅನುಪಾತದಡಿ ನಿವೇಶನ ಹಂಚಿಕೆ ಬಗ್ಗೆ ನಿರ್ಣಯಿಸಲಾಗಿದೆ. ಮುಡಾದಲ್ಲಿ ಬಿಜೆಪಿಯವರೇ ಭ್ರಷ್ಟಾಚಾರ ಮಾಡಿದ್ದು ತನಿಖೆ ನಡೆಯಬೇಕು. ಆಗಿನ ಸಮಿತಿಯಲ್ಲಿದ್ದ ಎಲ್ಲ ಶಾಸಕರ ಸದಸ್ಯತ್ವ ರದ್ದು ಮಾಡಬೇಕು. ಅವರು ಪಡೆದಿರುವ ಮುಡಾ ಸವಲತ್ತುಗಳನ್ನು ವಾಪಸ್ ಪಡೆಯಬೇಕು’ ಎಂದರು.
ದಸಂಸ ಸಂಚಾಲಕ ನಾರಾಯಣ ಮಾತನಾಡಿ, ‘ದೇವರಾಜ ಅರಸು ನಂತರ ಶೋಷಿತ ವರ್ಗಗಳ ಏಳಿಗೆಗೆ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಪಾರದರ್ಶಕ ಆಡಳಿತಕ್ಕೆ ಕಪ್ಪುಚುಕ್ಕೆ ತರಲು ಮುಡಾ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಜಮೀನಿಗೆ ಬದಲಿ ಪರಿಹಾರವಾಗಿ ನಿವೇಶನ ಕೊಟ್ಟರೆ ಅದು ತಪ್ಪೇ’ ಎಂದು ಪ್ರಶ್ನಿಸಿದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ‘ಸಿದ್ದರಾಮಯ್ಯ 48 ವರ್ಷ ಕಳಂಕರಹಿತ ರಾಜಕಾರಣ ಮಾಡಿದ್ದಾರೆ. ಇದೇ ಕೊನೆಯ ಚುನಾವಣೆಯೆಂದು ಹೇಳಿ ನಿವೃತ್ತಿಯಾಗುವುದಾಗಿ ಹೇಳಿದ್ದರು. 78 ವರ್ಷದ ಅವರಿಗೆ ಮುಡಾ ಹಗರಣದ ಕಪ್ಪುಚುಕ್ಕೆ ಬಳಿಯಲು ವಿರೋಧ ಪಕ್ಷದವರು ಮುಂದಾಗಿದ್ದಾರೆ. ಅದು ಫಲಿಸದು’ ಎಂದರು.
ರಂಗಕರ್ಮಿ ಎಚ್.ಜನಾರ್ಧನ್ ಅವರು ಕುವೆಂಪು ಅವರ ‘ತರುಣರಿರಾ ಎದ್ದೇಳಿ’ ಗೀತೆ ಹಾಡಿದರು. ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಕುಂಬಾರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಮಡಿವಾಳ ಸಮಾಜದ ಅಧ್ಯಕ್ಷ ರವಿನಂದನ್, ಲೋಕೇಶ್ ಕುಮಾರ್ ಮಾದಾಪುರ, ಮೊಗಣ್ಣಾಚಾರ್, ಹರೀಶ್ ರೆಡ್ಡಿ, ಸಿಟಿಜನ್ ಫೋರಂ ಅಧ್ಯಕ್ಷ ಕಲೀಂ, ನಾಸಿರ್ ಪಾಷಾ ಹಾಜರಿದ್ದರು.
ಸಿದ್ದರಾಮಯ್ಯ ಕೆಳಗಿಳಿಸಲು ಬಿಜೆಪಿ ಹುನ್ನಾರ ಮುಡಾ ಸ್ವಚ್ಛಗೊಳಿಸಲು ‘ದೊಣ್ಣೆ ಚಳವಳಿ’ ಶಾಸಕರು ಪಡೆದ ಸೌಲಭ್ಯ ವಾಪಸ್ ಮಾಡಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.