ADVERTISEMENT

ನಾಟಕವನ್ನೇ ಜೀವಿಸುವ ನಟಿಯರು!: ಎಂ.ವಿ.ಪ್ರತಿಭಾ

‘ನಟರು ನಟನೆಯ ಕುರಿತು..’ ಸಂವಾದದಲ್ಲಿ ರಂಗಕರ್ಮಿ ಪ್ರತಿಭಾ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 16:17 IST
Last Updated 7 ಫೆಬ್ರುವರಿ 2023, 16:17 IST
ಮೈಸೂರಿನಲ್ಲಿ ‘ಆ್ಯಕ್ಟಿಂಗ್‌ ಶಾಸ್ತ್ರ’ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ನಟರು ನಟನೆ ಕುರಿತು..’ ಸಂವಾದದಲ್ಲಿ ರಂಗಕರ್ಮಿ ಎಂ.ವಿ.ಪ್ರತಿಭಾ ಮಾತನಾಡಿದರು. ಮಲ್ಲಿಕಾ ಪ್ರಸಾದ್‌ ಸಿನ್ಹಾ, ರಾಮೇಶ್ವರಿ ವರ್ಮಾ, ವಾಣಿ ಪೆರಿಯೋಡಿ, ಪ್ರೀತಿ ನಾಗರಾಜ್, ಬಿಂದು ರಕ್ಷಿದಿ ಇದ್ದಾರೆ –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ‘ಆ್ಯಕ್ಟಿಂಗ್‌ ಶಾಸ್ತ್ರ’ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ನಟರು ನಟನೆ ಕುರಿತು..’ ಸಂವಾದದಲ್ಲಿ ರಂಗಕರ್ಮಿ ಎಂ.ವಿ.ಪ್ರತಿಭಾ ಮಾತನಾಡಿದರು. ಮಲ್ಲಿಕಾ ಪ್ರಸಾದ್‌ ಸಿನ್ಹಾ, ರಾಮೇಶ್ವರಿ ವರ್ಮಾ, ವಾಣಿ ಪೆರಿಯೋಡಿ, ಪ್ರೀತಿ ನಾಗರಾಜ್, ಬಿಂದು ರಕ್ಷಿದಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಮೈಸೂರು: ‘ನಟನೆ ಎಂದರೆ ಜವಾಬ್ದಾರಿ. ಕಲಾವಿದೆಯರು ಹಲವು ಸವಾಲುಗಳನ್ನು ಎದುರಿಸಿ ರಂಗಕೃತಿ ಹಾಗೂ ನಿರ್ದೇಶಕನ ಆಶಯವನ್ನು ಪ್ರೇಕ್ಷಕರಿಗೆ ದಾಟಿಸುತ್ತಾರೆ. ಅದಕ್ಕಾಗಿ ನಾಟಕವನ್ನೇ ಜೀವಿಸಿರುತ್ತಾರೆ’ ಎಂದು ರಂಗಕರ್ಮಿ ಎಂ.ವಿ.ಪ್ರತಿಭಾ ಪ್ರತಿಪಾದಿಸಿದರು.

ನಗರದ ಕಿರುರಂಗಮಂದಿರದಲ್ಲಿ ‘ಆ್ಯಕ್ಟಿಂಗ್‌ ಶಾಸ್ತ್ರ’ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ನಟರು ನಟನೆಯನ್ನು ಕುರಿತು..’ ಸಂವಾದದಲ್ಲಿ ಮಾತನಾಡಿದ ಅವರು, ‘ಕೃತಿ ತಲುಪಿಸುವಾಗ ವಾಚಿಕ ಹಾಗೂ ಆಂಗಿಕದ ಎಳೆ ತಪ್ಪಿದರೆ ಮೂಡುವ ಅರ್ಥವೇ ಬೇರೆಯಾಗುತ್ತದೆ. ಹೀಗಾಗಿ ನಟನೆ ಎಂದರೆ ಎಚ್ಚರ ಕೂಡ’ ಎಂದರು.

‘ನಾಟಕ ಪ್ರದರ್ಶನಕ್ಕಾಗಿ ದೂರದೂರಿಗೆ ತೆರಳಬೇಕಾದಾಗಲೇ ಮುಟ್ಟಿನ ಸಮಸ್ಯೆ ಕಾಡಿದೆ. ಪ್ರಯಾಣ, ಆಯಾಸ, ಸಂಕಷ್ಟದಲ್ಲಿಯೇ ನೋವು ನುಂಗಿಕೊಂಡು ಕೃತಿಯನ್ನು ದಾಟಿಸುವುದೇ ನಟರ ಜವಾಬ್ದಾರಿ. ಅದೊಂದು ಬದ್ಧತೆಯಾಗಿದೆ’ ಎಂದರು.

ADVERTISEMENT

‘ಹೇಳಿದೆ ಉಳಿದ ಅಂತಃ‍ಪಠ್ಯಗಳು ಕಲಾವಿದೆಯರಿಗೆ ಬಹಳಷ್ಟಿದೆ. ಮೊದಲ ನಾಟಕ ‘ವಸಂತ ಸೇನಾ’ದಲ್ಲಿ ವೇಶ್ಯೆಯ ಪಾತ್ರ ಮಾಡಿದಾಗ, ‘ಕೆರೆಗೆ ಹಾರ’ದಲ್ಲಿ ಭಾಗೀರಥಿ ಪಾತ್ರ ಸತ್ತುಹೋದಾಗ ನನ್ನ ಅಮ್ಮ ಸಂಕಟಪಟ್ಟಿದ್ದಳು. ನಾಟಕಗಳಲ್ಲಿ ಮಹಿಳೆಯರಿಗೆ ಒಳ್ಳೆಯ ಪಾತ್ರಗಳು ಸಿಗುವುದೇ ಕಷ್ಟವಿತ್ತು. ಕಾಗೆ–ಗುಬ್ಬಿಯಂಥ ಪಾತ್ರಗಳು ಸಿಗುತ್ತಿದ್ದವು. ಆಗೆಲ್ಲ ಪಾತ್ರಕ್ಕಾಗಿ ಹೋರಾಟ ಮಾಡಬೇಕಿತ್ತು’ ಎಂದು ನೆನಪಿಸಿಕೊಂಡರು.

‘28 ವರ್ಷದ ರಂಗಪಯಣವು ಓದುವ, ಬೆರೆಯುವ, ಅಭಿವ್ಯಕ್ತಿಸುವ ಅವಕಾಶವನ್ನು ನೀಡಿದೆ. ಪಾತ್ರಕ್ಕಾಗಿ ಮಾಡುವ ಸಿದ್ಧತೆಯಲ್ಲಿ ನಟಿಯನ್ನು ನಿರೂಪಿಸಿಕೊಳ್ಳುವುದಕ್ಕೆ ಸಮಾಜವು ಕಲಿಕೆಯನ್ನು ನೀಡಿದೆ. ನನ್ನಲ್ಲಿ ಮೂಡುವ ಪ್ರಶ್ನೆಗಳು ಪಾತ್ರಗಳ ಮೂಲಕ ಅಭಿವ್ಯಕ್ತಿಯಾಗಿದೆ’ ಎಂದರು.

‘ಹವ್ಯಾಸಿ ಕಲಾವಿದರೇ ರಂಗ ಸಂಘಟಕರಾಗಿರುತ್ತಾರೆ. ಸಂಘಟನೆ, ನಟನೆ ನಿಭಾಯಿಸುವುದೇ ದೊಡ್ಡ ಸವಾಲು. ಪಾತ್ರದ ಒಳಗೇ ಇರಲು ಆಗುವುದಿಲ್ಲ.‌ ವೇದಿಕೆ ಪ್ರವೇಶಿಸುವ ಒಂದೆರಡು ನಿಮಿಷದ ಮುನ್ನ ಜನರೇಟರ್‌ನಲ್ಲಿ ಇಂಧನವಿದೆಯೇ ಎಂದು ಯೋಚಿಸಿ ಹಣ ಕೊಟ್ಟಿರುತ್ತೇವೆ. ಅಭಿನಯ ಮಾಡುತ್ತಿರುವಾಗಲೇ ಸೈಡ್‌ವಿಂಗ್‌ನಿಂದ ಊಟ ತಯಾರಿದೆ ಎಂದು ಹೋಟೆಲ್‌ನವರು ಬಕೆಟ್‌ ಹಿಡಿದು ತೋರಿಸುತ್ತಿರುತ್ತಾರೆ’ ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.

‘ರಂಗಭೂಮಿಯೆಂದರೆ ಸಮಾನತೆ’: ರಂಗಕರ್ಮಿ ವಾಣಿ ಪೆರಿಯೋಡಿ ಮಾತನಾಡಿ, ‘ರಂಗಭೂಮಿಯೆಂದರೆ ಸಮಾನತೆ. ಗಡಿಗಳನ್ನು ದಾಟಿಸುವ ಸೌಂದರ್ಯ. ಅಲ್ಲಿ ಶ್ರಮ ವಿಭಜನೆಗೇ ಆದ್ಯತೆ, ಶ್ರೇಣೀಕರಣ ಎಂಬುದಿಲ್ಲ’ ಎಂದರು.

‘ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ನಟಿಯಾಗುವ ದೊಡ್ಡ ಸವಾಲು ನನ್ನ ಮುಂದೆ ಇತ್ತು. ಸ್ತ್ರೀ ದೇಹವೆಂದರೆ ಮಲಿನ. ತಗ್ಗಬೇಕು. ಬಾಗಬೇಕು. ಕಾಲ ಮೇಲೆ ಕಾಲುಹಾಕಿ ಕೂರುವಂತಿಲ್ಲ, ಮುಟ್ಟಾದಾಗ ಹೊರಗೆ ಕೂರಬೇಕಿತ್ತು. ದೇಹವೆಂದರೆ ನಾಚಿಕೆ ಎನಿಸುವಂತ ಕಠಿಣ ಪರಿಸ್ಥಿತಿಯಿತ್ತು. ನಟನೆಯು ಇದೆಲ್ಲವನ್ನೂ ಮೀರಿಕೊಳ್ಳುವ ಬಗೆಯನ್ನು ಕಲಿಸಿತು’ ಎಂದರು.

ರಂಗಕರ್ಮಿಗಳಾದ ಮಲ್ಲಿಕಾ ಪ್ರಸಾದ್‌ ಸಿನ್ಹಾ, ಬಿಂದು ರಕ್ಷಿದಿ ಮಾತನಾಡಿದರು. ಪ್ರೊ.ರಾಮೇಶ್ವರಿ ವರ್ಮಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಪ್ರೀತಿ ನಾಗರಾಜ್‌ ಸಂವಾದ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.