ADVERTISEMENT

ಅಮೃತ್‌ ಯೋಜನೆ: ಸದ್ಯದಲ್ಲೇ ಹೆಚ್ಚುವರಿ 1.5 ಕೋಟಿ ಲೀ. ನೀರು

ಕಾಮಗಾರಿ ತ್ವರಿತಗೊಳಿಸಲು ಪ್ರತಾಪಸಿಂಹ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 2:39 IST
Last Updated 4 ಸೆಪ್ಟೆಂಬರ್ 2020, 2:39 IST
ಸಂಸದ ಪ್ರತಾಪಸಿಂಹ ಅವರು ಗುರುವಾರ ಹೊಂಗಳ್ಳಿ ಜಲ ಶುದ್ಧೀಕರಣ ಘಟಕ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇದ್ದಾರೆ
ಸಂಸದ ಪ್ರತಾಪಸಿಂಹ ಅವರು ಗುರುವಾರ ಹೊಂಗಳ್ಳಿ ಜಲ ಶುದ್ಧೀಕರಣ ಘಟಕ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇದ್ದಾರೆ   

ಮೈಸೂರು: ಕೇಂದ್ರ ಪುರಸ್ಕೃತ ಅಮೃತ ಯೋಜನೆಯಡಿ ₹156 ಕೋಟಿ ಮೊತ್ತದಲ್ಲಿ ಮೈಸೂರು ನಗರಕ್ಕೆ ಪೂರೈಸಲು ಉದ್ದೇಶಿಸಿರುವ 24x7 ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸಂಸದ ಪ್ರತಾಪಸಿಂಹ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂಬಂಧ ನಡೆಯುತ್ತಿರುವ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿದರು. ಶ್ರೀರಂಗಪಟ್ಟಣ ತಾಲ್ಲೂಕಿನ ಹೊಂಗಳ್ಳಿಯಲ್ಲಿರುವ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಹೊಂಗಳ್ಳಿ ಯೋಜನೆಯನ್ನು ದಸರಾದೊಳಗೆ ಮುಗಿಸಲು ಸೂಚನೆ ನೀಡಿದ್ದೇನೆ. ಇದರಿಂದ ನಗರಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ಲೀಟರ್‌ ನೀರು ಸಿಗಲಿದೆ.ವಿಜಯನಗರದ ಎರಡನೇ ಹಂತದಲ್ಲಿರುವ ಕೇಂದ್ರ ಜಲಸಂಗ್ರಹಾಗಾರಕ್ಕೆ ನೀರು ಹರಿಸಬಹುದು. ಅಲ್ಲದೇ, ಅಶೋಕ ವೃತ್ತ (ಬಲ್ಲಾಳ್‌ ವೃತ್ತ), ಸರಸ್ವತಿಪುರಂ ಹಾಗೂ ಇತರ ಪ್ರದೇಶಗಳಿಗೆ ಕಾವೇರಿ ನೀರು ಪೂರೈಸಬಹುದು. ಅಲ್ಲಿಗೆ ಬರುತ್ತಿರುವ ಕಬಿನಿ ನೀರನ್ನು ‘ಮುಡಾ’ ಬಡಾವಣೆಗಳಿಗೆ ಹರಿಸಬಹುದು ಎಂದರು.

ADVERTISEMENT

‘2008ರಲ್ಲೇ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆ ಮಾಡಿದ್ದರೂ ಇದುವರೆಗೆ ಕಾರ್ಯಗತವಾಗಿರಲಿಲ್ಲ. ಪೈಪ್‌ಲೈನ್‌ ವ್ಯವಸ್ಥೆ ಇದ್ದರೂ ಪಂಪ್‌ ಇರಲಿಲ್ಲ. ಈಗ 1,500 ಎಚ್‌ಪಿ ಸಾಮರ್ಥ್ಯದ ಎರಡು ಪಂಪ್‌ಗಳನ್ನು ತರಿಸಲಾಗಿದೆ. ಒಂದು ಯಂತ್ರವನ್ನು ತಿಂಗಳೊಳಗೆ ಹೊಂಗಳ್ಳಿ ಘಟಕದಲ್ಲಿ ಅಳವಡಿಸಲಾಗುವುದು’ ಎಂದು ಹೇಳಿದರು.

ಹೊಂಗಳ್ಳಿ 2ನೇ ಹಂತ ಮತ್ತು 3ನೇ ಹಂತದ 3.6 ಕೋಟಿ ಲೀಟರ್‌ ಹಾಗೂ 4 ಕೋಟಿ ಲೀಟರ್‌ ನೀರಿನ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕಗಳನ್ನು ನವೀಕರಣಗೊಳಿಸಿ ಕ್ರಮವಾಗಿ 5.4 ಕೋಟಿ ಲೀಟರ್‌ ಹಾಗೂ 6.5 ಕೋಟಿ ಲೀಟರ್‌ ನೀರಿನ ಸಾಮರ್ಥ್ಯಕ್ಕೆ ಹೆಚ್ಚಿಸುವ ಕಾಮಗಾರಿ ನಡೆಯುತ್ತಿದೆ. ಹೊಂಗಳ್ಳಿ ಜಲಶುದ್ಧೀಕರಣ ಘಟಕದಿಂದ ವಿಜಯನಗರ ಜಲಸಂಗ್ರಹಾಗಾರಕ್ಕೆ 12.2 ಕಿ.ಮೀ ಮಾರ್ಗದಲ್ಲಿ ಕೊಳವೆ ಅಳವಡಿಸಲಾಗುತ್ತಿದೆ. ಅದರಲ್ಲಿ 11.95 ಕಿ.ಮೀ ಕಾಮಗಾರಿ ಮುಗಿದಿದೆ.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಹಮ್ಮದ್‌ ಮುಶ್ರಫ್‌, ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಪ್ರಸನ್ನಮೂರ್ತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಸಿಫ್‌ ಇದ್ದರು.

250 ಮನೆಗಳು ಸಿದ್ಧ: ಕೆಸರೆಯಲ್ಲಿ ಕೊಳೆಗೇರಿ ಮಂಡಳಿ ವತಿಯಿಂದ ನಿರ್ಮಿಸಿರುವ 250 ಮನೆಗಳನ್ನು ಸಂಸದರು ಪರಿಶೀಲಿಸಿದರು. ಇಲ್ಲಿ ಸೌಲಭ್ಯ ಕಲ್ಪಿಸಿ ರೈಲ್ವೆ ಹಳಿ ಪಕ್ಕದಲ್ಲಿರುವ ಮೇದಾರ್‌ ಬ್ಲಾಕ್‌ ಮತ್ತು ಯಾದವಗಿರಿ ಕೊಳೆಗೇರಿ ಜನರನ್ನು ಸದ್ಯದಲ್ಲೇ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ಮನೆಗಳನ್ನು ನಿರ್ಮಿಸಿ 4 ವರ್ಷಗಳಾಗಿದ್ದು, ಕಿಟಕಿ, ಬಾಗಿಲುಗಳು ನಾಪತ್ತೆ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.