ADVERTISEMENT

ಕಚೇರಿ ಸ್ಥಳಾಂತರಕ್ಕೆ ಒಪ್ಪಿದ ಕಸಾಪ

ಬಿರುಕು ಬಿಟ್ಟಿರುವ ಗೋಡೆ, ತಾರಸಿ; ಅರಮನೆ ಮಂಡಳಿಯಿಂದ ನವೀಕರಣ

ಕೆ.ಓಂಕಾರ ಮೂರ್ತಿ
Published 25 ಏಪ್ರಿಲ್ 2019, 20:28 IST
Last Updated 25 ಏಪ್ರಿಲ್ 2019, 20:28 IST
ಬಿರುಕು ಬಿಟ್ಟಿರುವ ಕಸಾಪ ಕಟ್ಟಡ
ಬಿರುಕು ಬಿಟ್ಟಿರುವ ಕಸಾಪ ಕಟ್ಟಡ   

ಮೈಸೂರು: ಕಟ್ಟಡ ನವೀಕರಣಕ್ಕೆ ಅನುವು ಮಾಡಿಕೊಡಲು ಜಿಲ್ಲಾ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕೊನೆಗೂ ಒಪ್ಪಿಕೊಂಡಿದೆ.

ಮೈಸೂರು ಅರಮನೆಯ ಜಯರಾಮ ದ್ವಾರದ ಬಲಭಾಗ ಇರುವ ಕಸಾಪ ಜಿಲ್ಲಾ ಕಚೇರಿಯ ಗೋಡೆ ಹಾಗೂ ತಾರಸಿ ಬಿರುಕು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಕಾಮಗಾರಿ ಕೈಗೆತ್ತಿಕೊಳ್ಳಲು ಕಚೇರಿ ಸ್ಥಳಾಂತರಿಸುವಂತೆ ಅರಮನೆ ಮಂಡಳಿ ಬಹಳ ದಿನಗಳಿಂದ ಒತ್ತಾಯಿಸುತ್ತಿದೆ. ಕಚೇರಿ ಸ್ಥಳಾಂತರ ಮಾಡದ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ.

‘ಶೀಘ್ರದಲ್ಲೇ ಕಚೇರಿಯನ್ನು ವಿಜಯನಗರದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿ ಕಾಮಗಾರಿಗೆ ಅನುವು ಮಾಡಿಕೊಡುತ್ತೇವೆ. ಪೀಠೋಪಕರಣಗಳು ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಲಿದ್ದೇವೆ’ ಎಂದು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಶಿಥಿಲವಾಗಿರುವ ಕಟ್ಟಡ: ಕಟ್ಟಡ ಕುಸಿದು ಬೀಳುವ ಆತಂಕ ಮೂಡಿದ್ದು, ಶಿಥಿಲ ಕಟ್ಟಡದಲ್ಲೇ ಪರಿಷತ್ತಿನ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಗೋಡೆಗಳು ಬಿರುಕು ಬಿಟ್ಟಿದ್ದರೆ, ಚಾವಣಿಯ ಆರ್‌ಸಿಸಿ ಕುಸಿಯುವ ಹಂತ ತಲುಪಿದೆ. ಕೆಲವೆಡೆ ಸಿಮೆಂಟ್‌ ಕಿತ್ತು ಹೋಗಿದ್ದು, ಸುಣ್ಣಬಣ್ಣ ಕಳೆದುಕೊಂಡು ಮಾಸಿದೆ. ಮುಂಭಾಗದಲ್ಲಿ ಗಿಡಗಂಟಿಗಳು ಬೆಳೆದಿವೆ.

1990ರಲ್ಲಿ ಅರಮನೆ ಆವರಣದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಆ ಬಳಿಕ ಅರಮನೆಗೆ ಸೇರಿದ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿ ಜಿಲ್ಲಾ ಕಸಾಪ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ್ದೇ ನಾಲ್ವಡಿ ಕೃಷ್ಣರಾಜ ಒಡೆಯರ್‌.

‘ಕಸಾಪ‍ಕ್ಕೆ ಅವರದೇ ಆದ ದೊಡ್ಡ ಸುಸಜ್ಜಿತ ಕಟ್ಟಡ ವಿಜಯನಗರದಲ್ಲಿದೆ. ಕನಿಷ್ಠ 6 ತಿಂಗಳು ಖಾಲಿ ಮಾಡಿಕೊಟ್ಟರೆ ಕಟ್ಟಡವನ್ನು ದುರಸ್ತಿಗೊಳಿಸಿ ವಾಪಸ್ ನೀಡಲಾಗುವುದು. ಈ ವಾರದಲ್ಲಿ ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ. ಪಕ್ಕದಲ್ಲೇ ಇರುವ ಮತ್ತೊಂದು ಮನೆಯೂ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಹಲವು ವರ್ಷಗಳಿಂದ ವಾಸವಿರುವ ಕುಟುಂಬದವರು ತೆರವು ಮಾಡಲು ಒಪ್ಪುತ್ತಿಲ್ಲ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಹೇಳಿದರು.

ವಿಜಯನಗರದಲ್ಲಿನ ಕಸಾಪ ಕಚೇರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಸಂಜೆ ಯಂಥ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ಧ್ವನಿವರ್ಧಕ ಸೇರಿದಂತೆ ಕೆಲ ಸೌಲಭ್ಯಗಳು ಇಲ್ಲಿಲ್ಲ. ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಗರದ ಮಧ್ಯಭಾಗದಲ್ಲಿರುವ ಅರಮನೆ ಆವರಣದಲ್ಲಿರುವ ಕಚೇರಿಯಲ್ಲಿ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.