ಹುಣಸೂರು: ತಾಲ್ಲೂಕಿನಾದ್ಯಂತ ವಾಡಿಕೆ ಮಳೆ ಮೇ 19ರವರೆಗೆ 160 ಮಿ.ಮೀ ಆಗಿದ್ದು ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಉತ್ತಮವಾಗಿದ್ದು ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರಸಗೊಬ್ಬರ, ಬಿತ್ತನೆ ಬೀಜ ಸಕಾಲಕ್ಕೆ ರೈತನ ಕೈ ಸೇರಿ ಜನವರಿಯಿಂದ ಮೇ 15ರವರೆಗೆ 26,876 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಒಟ್ಟು 76,422 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ನಡೆಸುವ ಗುರಿ ಇದೆ.
ಹುಣಸೂರು ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಯೋಗ್ಯವಾಗಿರುವ ಭೂಮಿ ಅಂದಾಜು 76,422 ಹೆಕ್ಟೇರ್ ಪ್ರದೇಶವಿದೆ. ಈ ಪೈಕಿ ಈಗಾಗಲೇ ಬಹುತೇಕ ಪ್ರದೇಶ ಭೂಮಿ ಹದಗೊಳಿಸುವ ಪ್ರಕ್ರಿಯೆ ಮುಕ್ತಾಯವಾಗಿ ಮುಂಗಾರು ಹಂಗಾಮು ಆರಂಭದಲ್ಲಿ ವಾಣಿಜ್ಯ ಬೆಳೆ ತಂಬಾಕು ನಾಟಿ ಪ್ರಕ್ರಿಯೆ ಮುಕ್ತಾಯಗೊಳ್ಳುವ ಹಂತದಲ್ಲಿದ್ದು, ನಂತರದಲ್ಲಿ ರಾಗಿ, ಮುಸುಕಿನ ಜೋಳ ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆ ನಡೆಯಲಿದೆ ಎನ್ನುವರು ಕೃಷಿ ಸಹಾಯಕ ನಿರ್ದೇಶಕ ಅನಿಲ್ ಕುಮಾರ್.
ದಾಸ್ತಾನು: ದ್ವಿದಳ ಧಾನ್ಯಗಳಲ್ಲಿ ಹೆಚ್ಚಿನ ಪ್ರದೇಶದಲ್ಲಿ ಅಲಸಂದೆ ಬೆಳೆಯುವ ವಾಡಿಕೆ ಇದ್ದು, 6,180 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಈ ಪೈಕಿ ಈಗಾಗಲೇ 3,710 ಕ್ವಿಂಟಲ್ ಮಾರಾಟ ಮಾಡಲಾಗಿದೆ. ಉದ್ದು 240 ಕ್ವಿಂಟಲ್ ದಾಸ್ತಾನು ಇದ್ದು 115 ಕ್ವಿಂಟಲ್ ರೈತ ಪಡೆದಿದ್ದು, ಹೆಸರುಕಾಳು 60 ಕ್ವಿಂಟಲ್ ಲಭ್ಯವಿದೆ.
ಈ ಸಾಲಿನಿಂದ ಖಾಸಗಿ ಕಂಪನಿಗಳು ಮಾರಾಟ ಮಾಡುವ ಮುಸುಕಿನ ಜೋಳವನ್ನು ರೈತ ಸಂಪರ್ಕ ಕೇಂದ್ರದಲ್ಲೇ ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಗಂಗಾ, ಕಾವೇರಿ ಎರಡು ತಳಿಗಳು ಲಭ್ಯವಿದ್ದು ಒಟ್ಟು 2,600 ಕ್ವಿಂಟಲ್, ಜೋರಾನ್ ಫೋಕ್ ಪಾಂಡ್ ಸೀಡ್ಸ್ ಕಂಪನಿಗೆ ಸೇರಿದ 7,200 ಕ್ವಿಂಟಲ್ ಮತ್ತು ಕಾವೇರಿ ಸೀಡ್ಸ್ ಕಂಪನಿಯ 1,464 ಕ್ವಿಂಟಲ್ ಮಾರಾಟಕ್ಕೆ ಲಭ್ಯವಿದ್ದು ರೈತರು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ನಿಖರ ದರ ನೀಡಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ರಸಗೊಬ್ಬರ: ರಸಗೊಬ್ಬರ ಸಮಸ್ಯೆ ಈ ಸಾಲಿನಲ್ಲಿ ಕಂಡು ಬಂದಿಲ್ಲ, ತಂಬಾಕು ಬೆಳೆಗಾರರಿಗೆ ಈಗಾಗಲೇ ಕಾಫ್ ಸಮಿತಿಯಿಂದ 27 ಸಾವಿರ ಟನ್ ಗೊಬ್ಬರ ವಿತರಿಸಿದ್ದು, ರೈತರ ಬಳಿ ದಾಸ್ತಾನು ಸಾಕಷ್ಟು ಇದೆ.
76,422 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ದಾಸ್ತಾನು ಮುಕ್ತಾಯ ಹಂತದಲ್ಲಿ ತಂಬಾಕು ನಾಟಿ
ನ್ಯಾನೋ ಯೂರಿಯಾ ಗೊಬ್ಬರ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸಿದ್ದು ಇಫ್ಕೋ ಕಂಪನಿ ಸಹಕಾರದಲ್ಲಿ ಜಾಗೃತಿ ಅಭಿಯಾನ ನಡೆಸಲಿದ್ದೇವೆಅನಿಲ್ ಕುಮಾರ್ ಕೃಷಿ ಸಹಾಯಕ ನಿರ್ದೇಶಕ
ಮುಂಗಾರಿನ ಮೊದಲ ಮಳೆಯಲ್ಲಿ ಎಳ್ಳು ಬೇಸಾಯ ಮಾಡಿದ್ದು ಮುಂದಿನ 20 ದಿನಕ್ಕೆ ಎಳ್ಳು ಕಟಾವಿಗೆ ಬರಲಿದ್ದು ನಂತರ ತಂಬಾಕು ಅಥವಾ ರಾಗಿ ನಾಟಿ ಮಾಡುವ ಆಲೋಚನೆ ಇದೆ.ಮಂಜುನಾಥ್ ಕಲ್ಕುಣಿಕೆ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.