ADVERTISEMENT

ಕೋಚಗನಹಳ್ಳಿ ರೈತರಿಂದ ಅಹೋರಾತ್ರಿ ಧರಣಿ‌ ಅ 7ರಿಂದ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 10:41 IST
Last Updated 4 ಅಕ್ಟೋಬರ್ 2021, 10:41 IST

ಮೈಸೂರು: ‘ಮೋಸಕ್ಕೊಳಗಾದ ಕೋಚನಹಳ್ಳಿಯ ರೈತರು ವಿವಿಧ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಅ.7ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಲಿದ್ದಾರೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೋಮವಾರ ಇಲ್ಲಿ ತಿಳಿಸಿದರು.

‘ದಸರಾ ಉದ್ಘಾಟನೆಯಂದೇ ಧರಣಿಯೂ ಶುರುವಾಗಲಿದೆ. ದಸರಾ ನೋಡಲು ಮೈಸೂರಿಗೆ ಬರುವ ಜನರು ರೈತರ ಪ್ರತಿಭಟನೆಯನ್ನೂ ನೋಡಲಿ. ಜಿಲ್ಲಾಡಳಿತ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಹೆರಿಟೇಜ್‌ ಗಾಲ್ಫ್‌ ಕ್ಲಬ್‌ ಆರಂಭಿಸಲಿಕ್ಕಾಗಿ ಐವರು 2004ರಲ್ಲಿ ರೈತರಿಂದ 400 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಪಡೆದಿದ್ದರು. ಆದರೆ ಇದೀಗ ಇಲ್ಲಿ ಯಾವೊಂದು ಚಟುವಟಿಕೆ ನಡೆದಿಲ್ಲ. 189 ಎಕರೆ ಜಮೀನನ್ನು ಕೆಐಎಡಿಬಿಗೆ 1 ಎಕರೆಗೆ ₹ 49 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಇದನ್ನು ವಿರೋಧಿಸಿ ರೈತರು 194 ದಿನಗಳಿಂದಲೂ ಅವಿರತ ಹೋರಾಟ ನಡೆಸಿದ್ದಾರೆ’ ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ತಿಳಿಸಿದರು.

ADVERTISEMENT

‘ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡು ರಿಯಲ್‌ ಎಸ್ಟೇಟ್‌ ದಂಧೆ ನಡೆದಿದೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.