ADVERTISEMENT

ಮೈಸೂರು | ರಾಜ್ಯ ಸರ್ಕಾರದ ವಿರುದ್ಧ ಎಐಟಿಯುಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 14:22 IST
Last Updated 24 ಜುಲೈ 2020, 14:22 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನೇತೃತ್ವದಲ್ಲಿ ಕಾರ್ಮಿಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ವ್ಯತ್ಯಸ್ಥ ತುಟ್ಟಿಭತ್ಯೆ ಪಾವತಿಯನ್ನು 2021ರ ಮಾರ್ಚ್ 31ರವರೆಗೆ ಮುಂದೂಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದೊಂದು ಕಾರ್ಮಿಕರ ವಿರೋಧಿ ನಡೆ ಎಂದು ಕಾರ್ಯಕರ್ತರು ಖಂಡಿಸಿದರು.

ತಿಂಗಳಿಗೆ ಅಲ್ಪ ಆದಾಯ ಇರುವ ಬಡ ಕಾರ್ಮಿಕರನ್ನು ಸರ್ಕಾರದ ಈ ನಿರ್ಧಾರವು ಸಂಕಷ್ಟಕ್ಕೆ ದೂಡುತ್ತದೆ. ಇನ್ನಾದರೂ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಕೋವಿಡ್ ಕಾರಣದಿಂದ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ನರಳಾಡುತ್ತಿದ್ದಾರೆ. ಆದರೆ, ಸರ್ಕಾರ ಉದ್ಯೋಗ ನಾಶಕ್ಕೆ ಪೂರಕವಾದ ನಿಗದಿತ ಅವಧಿ ಕೆಲಸ ಸೇರಿದಂತೆ ಹಲವು ಕ್ರಮ ಕೈಗೊಳ್ಳುವ ಮೂಲಕ ಬಡಜನರ ಮೇಲೆ ಬರೆ ಎಳೆದಿದೆ ಎಂದು ಕಿಡಿಕಾರಿದರು.

ವೇತನ ಕಡಿತದಂತಹ ಕ್ರಮಗಳ ಮೂಲಕ ಬಡ ಕಾರ್ಮಿಕರ ವೇತನವನ್ನು ಲೂಟಿ ಮಾಡಿ ಕೈಗಾರಿಕೆಗಳ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರುವುದು ಘೋರ ದುರಂತ ಎಂದು ವಿಶ್ಲೇಷಿಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಉಪಪ್ರಧಾನ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.