ADVERTISEMENT

ಅಕ್ಕರೈ ಸಹೋದರಿಯರ ಗಾಯನ ಲಹರಿ...

ವಿ.ವಿ.ಮೊಹಲ್ಲಾ 8ನೇ ಕ್ರಾಸ್‌: ಪಾರಂಪರಿಕ ಸಂಗೀತೋತ್ಸವದಲ್ಲಿ ‘ದ್ವಂದ್ವ ಗಾಯನ’

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 16:22 IST
Last Updated 2 ಸೆಪ್ಟೆಂಬರ್ 2022, 16:22 IST
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಶುಕ್ರವಾರ ವಿದುಷಿ ಅಕ್ಕರೈ ಶುಭಲಕ್ಷ್ಮಿ, ವಿದುಷಿ ಅಕ್ಕರೈ ಸ್ವರ್ಣಲತಾ ಅವರ ‘ದ್ವಂದ್ವ ಗಾಯನ’ ಲಹರಿ -ಪ್ರಜಾವಾಣಿ ಚಿತ್ರ 
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಶುಕ್ರವಾರ ವಿದುಷಿ ಅಕ್ಕರೈ ಶುಭಲಕ್ಷ್ಮಿ, ವಿದುಷಿ ಅಕ್ಕರೈ ಸ್ವರ್ಣಲತಾ ಅವರ ‘ದ್ವಂದ್ವ ಗಾಯನ’ ಲಹರಿ -ಪ್ರಜಾವಾಣಿ ಚಿತ್ರ    

ಮೈಸೂರು: ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಅಕ್ಕರೈ ಸಹೋದರಿಯರ ‘ದ್ವಂದ್ವ ಗಾಯನ’ ಲಹರಿಯು ಸಂಗೀತ ಪ್ರಿಯರ ಮನಸೂರೆಗೊಂಡಿತು.

‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಲಾಗಿರುವ ಸಂಗೀತೋತ್ಸವದ ಉದ್ಘಾಟನಾ ದಿನದಂದು ‘ವಯಲಿನ್‌ ವಾದನ’ದಲ್ಲಿ ಮೋಡಿ ಮಾಡಿದ್ದವಿದುಷಿ ಅಕ್ಕರೈ ಶುಭಲಕ್ಷ್ಮಿ, ವಿದುಷಿ ಅಕ್ಕರೈ ಸ್ವರ್ಣಲತಾಸಹೋದರಿಯರು ಶುಕ್ರವಾರ ‘ಕರ್ನಾಟಕ ಸಂಗೀತ’ ಗಾಯನ ಸುಧೆಯನ್ನು ಹರಿಸಿದರು.

ಗಣೇಶ ಸ್ತುತಿಯೊಂದಿಗೆ ಕಛೇರಿ ಆರಂಭಿಸಿದ ಅವರು, ಅಜ್ಜ ಸುಚೀಂದ್ರಂ ಎಸ್‌.ಪಿ.ಶಿವಸುಬ್ರಹ್ಮಣಿಯಮ್‌ ಸಂಯೋಜಿಸಿರುವ‘ಮುರುಗ’ ದೇವರ ಕುರಿತ ‘ಘನಪಂಚ ರಾಗಮಾಲಿಕೆ’ಯ ‘ಕೇಟ್ಟ ವರಂ ತರುವಾನ್‌’ ಕೃತಿಯನ್ನು‍ಪ್ರಸ್ತುತ ಪಡಿಸಿದರು.‌‘ನಾಟ’, ‘ಗೌಳಿ’, ‘ಆರಭಿ’, ‘ವರಾಳಿ’, ‘ಶ್ರೀ’ ರಾಗಗಳ ಆರೋಹ, ಅವರೋಹಗಳು ಶ್ರೋತೃಗಳನ್ನು ತಲೆದೂಗಿಸಿದವು.

ADVERTISEMENT

ಅಕ್ಕರೈ ಸ್ವರ್ಣಲತಾ ಸಂಯೋಜಿಸಿರುವ ‘ಭವಾನಿ’ ರಾಗದ ‘ಕರುಣಾಕರಿ ಕಾವವೇ ಭವಾನಿ’ ಕೃತಿಯನ್ನು ಹಾಡಿದ ಸಹೋದರಿಯರು, ಭಕ್ತಿ– ಕರುಣಾ ರಸಭಾವವನ್ನು ಕೇಳಗರ ನಡುವೆ ಪಸರಿಸಿದರು. ನಂತರ ಕಲ್ಯಾಣಿ, ಕಾಂಬೋಜಿ ರಾಗಗಳಲ್ಲಿ ಕೃತಿಗಳನ್ನು ಹಾಡಿದರು.

ವಿಠ್ಠಲ ರಂಗನ್‌– ವಯಲಿನ್‌, ಕೆ.ಯು.ಜಯಚಂದ್ರರಾವ್– ಮೃದಂಗಂ, ವಾಳೈಪಲ್ಲಿ ಕೃಷ್ಣ ಕುಮಾರ್‌– ಘಟಂನಲ್ಲಿ ಸಾಥ್ ನೀಡಿದರು. ಗಾಯನದೊಂದಿಗೆ ವಾದ್ಯಕಾರರಿಗೂ ಪ್ರತಿಭೆ ತೋರುವ ‘ಕಾಲ’ವನ್ನು ನೀಡಿದ ಸಹೋದರಿಯರು, ಸಮಷ್ಟಿ ಭಾವವನ್ನು ಮೂಡಿಸಿದರು. ಎದುರು ಕುಳಿತಿದ್ದ ಮಕ್ಕಳು, ಚಿಣ್ಣರು, ಯುವಕ– ಯುವತಿಯರು ತಾಳ ಹಾಕುತ್ತಾ ಸಂಗೀತದ ರುಚಿಯನ್ನು ಆಸ್ವಾದಿಸಿದರು.

ಕಛೇರಿಗೂ ಮುನ್ನ ವಿದುಷಿ ಅನ್ನ‍ಪೂರ್ಣ ನಾಗೇಂದ್ರ ಹಾಗೂ ಜಿ.ದಕ್ಷಿಣಾಮೂರ್ತಿ ‘ದುರ್ಯೋದನ ವಿಲಾಪ’ ಕಾವ್ಯವಾಚನ ಮಾಡಿದರು.

ಮಲ್ಲಾಡಿ ಸಹೋದರರ ಗಾಯನ ಇಂದು: ಸೆ.3ರ ಶನಿವಾರ ಸಂಜೆ 6.45ಕ್ಕೆ ವಿದ್ವಾನ್‌ ಮಲ್ಲಾಡಿ ಶ್ರೀರಾಂಪ್ರಸಾದ್‌, ವಿದ್ವಾನ್ ಮಲ್ಲಾಡಿ ರವಿಕುಮಾರ್‌ ಅವರ ‘ದ್ವಂದ್ವ ಗಾಯನ’ವಿದೆ. ವಯಲಿನ್‌ನಲ್ಲಿ ವಿದ್ವಾನ್‌ ಎಂಬಾರ್‌ ಕಣ್ಣನ್, ಮೃದಂಗದಲ್ಲಿ ವಿದ್ವಾನ್‌ ಅರ್ಜುನ್‌ ಕುಮಾರ್‌ ಹಾಗೂ ಘಟಂನಲ್ಲಿವಿದ್ವಾನ್‌ ಜಿ.ಎಸ್‌.ರಾಮಾನುಜನ್ ಸಾಥ್‌ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.