ADVERTISEMENT

ಆದಿವಾಸಿಗಳ ಸೇವೆಗೆ ಸದಾ ಸಿದ್ಧ: ಪ್ರಭು ನಂಜುಂಡಯ್ಯ

ನಿಸರ್ಗ ಫೌಂಡೇಷನ್ ಸಂಸ್ಥೆಯ 28ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:47 IST
Last Updated 8 ಜುಲೈ 2025, 2:47 IST
ಎಚ್.ಡಿ.ಕೋಟೆ ಪಟ್ಟಣದ ನಿಸರ್ಗ ಫೌಂಡೇಶನ್‌ ಸಂಸ್ಥೆಯಲ್ಲಿ ಸೋಮವಾರ 28ನೇ ವಾರ್ಷಿಕೋತ್ಸವ ಪ್ರಯುಕ್ತ ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಡಿ.ಎಂ.ಬಸವರಾಜು ಸಂಸ್ಥೆ ಸಂಸ್ಥಾಪಕ ದಿ. ನಂಜುಂಡಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು
ಎಚ್.ಡಿ.ಕೋಟೆ ಪಟ್ಟಣದ ನಿಸರ್ಗ ಫೌಂಡೇಶನ್‌ ಸಂಸ್ಥೆಯಲ್ಲಿ ಸೋಮವಾರ 28ನೇ ವಾರ್ಷಿಕೋತ್ಸವ ಪ್ರಯುಕ್ತ ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಡಿ.ಎಂ.ಬಸವರಾಜು ಸಂಸ್ಥೆ ಸಂಸ್ಥಾಪಕ ದಿ. ನಂಜುಂಡಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು   

ಎಚ್.ಡಿ.ಕೋಟೆ: ‘ಆದಿವಾಸಿ ಜನರ ಸೇವೆಗಾಗಿ ಮುಡಿಪಾಗಿರುವ ನಮ್ಮ ಸಂಸ್ಥೆಯ ಯಶಸ್ಸಿನಲ್ಲಿ ಸಂಸ್ಥೆಯ ಸಂಸ್ಥಾಪಕ ದಿ. ನಂಜುಂಡಯ್ಯ ಮತ್ತು ಕಾರ್ಯಕರ್ತರ ಪರಿಶ್ರಮವಿದೆ’ ಎಂದು ಸಂಸ್ಥೆ ನಿರ್ದೇಶಕ ಪ್ರಭು ನಂಜುಂಡಯ್ಯ ತಿಳಿಸಿದರು.

ಪಟ್ಟಣದಲ್ಲಿರುವ ನಿಸರ್ಗ ಫೌಂಡೇಷನ್ ಸಂಸ್ಥೆಯ ಆವರಣದಲ್ಲಿ ಸೋಮವಾರ ನಡೆದ 28ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವನ್ಯಜೀವಿ ಸಂರಕ್ಷಣೆ ಕಾಯ್ದೆ–1972 ಜಾರಿಯಿಂದ ಅನ್ಯಾಯಕ್ಕೊಳಗಾದ ಆದಿವಾಸಿ ಜನರಿಗೆ ನ್ಯಾಯ ಕಲ್ಪಿಸಲು ಸಂಘ–ಸಂಸ್ಥೆಗಳ ಹೋರಾಟದ ಫಲವಾಗಿ ಅರಣ್ಯ ಹಕ್ಕು ಕಾಯ್ದೆ– 2006 ಜಾರಿಗೆ ಬಂತು’ ಎಂದು ಸ್ಮರಿಸಿದರು.

‘ಕಾಯ್ದೆ ಜಾರಿಯಾಗಿ 19 ವರ್ಷ ಕಳೆದರೂ ಇನ್ನೂ ಸಿಗಬೇಕಾದ ಹಕ್ಕುಗಳು ಸರಿಯಾದ ಪ್ರಮಾಣದಲ್ಲಿ ದೊರಕಿಲ್ಲ. ಎಲ್ಲಾ ಆದಿವಾಸಿಗಳು ಒಗ್ಗಟ್ಟಿನಿಂದ ಹೊರಾಟ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದಲೂ ಬದಲಾವಣೆ ತರಲು ಸಾಧ್ಯ. ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ನ್ಯಾಯ ಕೊಡಿಸುವ ಮೂಲಕ ಸಂಸ್ಥೆಯ ಸ್ಥಾಪಕರ ಉದ್ದೇಶ ನನಸು ಮಾಡೋಣ’ ಎಂದರು.

ADVERTISEMENT

ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಡಿ.ಎಂ.ಬಸವರಾಜು ಮಾತನಾಡಿ, ‘ಸಂಸ್ಥೆಯು 28 ವರ್ಷಗಳಿಂದ ಆದಿವಾಸಿಗಳೊಟ್ಟಿಗೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಮುಂದೆಯೂ ಸಹ ಶ್ರಮಿಸಲಿ’ ಎಂದರು.

ನಿಸರ್ಗ ಆಡಳಿತ ಮಂಡಳಿ ಸದಸ್ಯೆ ಮಾರನಹಾಡಿ ದೇವಮ್ಮ ಮಾತನಾಡಿ, ‘ಆದಿವಾಸಿಗಳ ಹಕ್ಕುಗಳಿಗಾಗಿ ಹಳ್ಳಿಯಿಂದ ದೆಹಲಿಯವರೆಗೂ ಹೋರಾಟದ ಫಲವಾಗಿ ಅರಣ್ಯಹಕ್ಕು ಕಾಯ್ದೆ ಜಾರಿಯಾಯಿತು. ಈ ಕಾಯ್ದೆ ಕಾನೂನುಗಳ ಬಗ್ಗೆ ಪ್ರತೀ ಹಾಡಿಗೂ ಕಾಲ್ನಡಿಗೆಯ ಜಾಥದ ಮೂಲಕ ದಿವಂಗತ ನಂಜುಂಡಯ್ಯ ಅವರು ತೆರಳಿ ಜಾಗೃತಿ ಮೂಡಿಸಿದ್ದರು’ ಎಂದು ಸ್ಮರಿಸಿದರು.

1998ರಲ್ಲಿ ಬುಡಕಟ್ಟು ಕೃಷಿಕರ ಸಂಘ ಹಾಗೂ ವನವಾಸಿ ಮಹಿಳಾ ಸಂಘಗಳ ಸ್ಥಾಪಿಸುವಲ್ಲಿ ದಿ.ನಂಜುಂಡಯ್ಯ ಪಾತ್ರ ಅಪಾರ
ಡಿ.ಎಂ.ಬಸವರಾಜ, ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ

ಡಿ.ಜಿ.ಎಂ. ರಾಮಕೃಷ್ಣ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಭೀಮನಹಳ್ಳಿ ರಾಜಣ್ಣ, ಜವರಮ್ಮ, ದೇವಮ್ಮ, ಪಾಪಣ್ಣ, ಕೆಂಪಯ್ಯ, ಉಮೇಶ, ಸಣ್ಣಪ್ಪ, ತಾಯಮ್ಮ, ನಿಸರ್ಗ ಸಂಸ್ಥೆಯ ಚಿಕ್ಕತಿಮ್ಮನಾಯ್ಕ, ಬೈರನಾಯಕ, ಜ್ಯೋತಿ, ರೇಷ್ಮಾ, ತಂಝಿಲಾ ನಾಜ಼್, ಕನ್ಯಾಕುಮಾರಿ, ಶೃತಿ, ಜಾನಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.