ಹುಣಸೂರು: ಭಾರತಕ್ಕೆ ಸಂವಿಧಾನ ಕೊಡುಗೆ ನೀಡಿ ಮೂಲಭೂತ ಸವಲತ್ತುಗಳೊಂದಿಗೆ ಶ್ರೀಸಾಮಾನ್ಯರು ಅಭಿವೃದ್ಧಿ ಹೊಂದಲು ಅವಕಾಶ ಕಲ್ಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದಿಂದ ಗಳಿಸಿದ್ದ ಜ್ಞಾನ ಸಂಪತ್ತು ಯುವ ಸಮುದಾಯಕ್ಕೆ ಆದರ್ಶವಾಗಬೇಕಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ದೇಶದ ಸರ್ವ ಜನಾಂಗದವರಿಗೂ ಒಳಿತಾಗುವ ದಿಕ್ಕಿನಲ್ಲಿ ಸಾಂವಿಧಾನಿಕ ಹಕ್ಕು ನೀಡಿದ್ದಾರೆ. ಹಕ್ಕುಗಳನ್ನು ಬಳಸಿಕೊಂಡ ನಾಗರಿಕರು ಸರ್ವತೋಮುಖ ಅಭಿವೃದ್ಧಿ ಹೊಂದಿದ್ದಾರೆ. ಮಹಾನ್ ವ್ಯಕ್ತಿ ಹೊಂದಿದ್ದ ಜ್ಞಾನ ಇತರರಿಗೆ ದಾಸೋಹವಾಗಬೇಕಿದೆ ಎಂದರು.
ಅಂಬೇಡ್ಕರ್ ಪ್ರತಿಭೆಯಿಂದ ವಿಶ್ವದ ನಾಯಕರಾಗಿ ಹೊರಹೊಮ್ಮಿದ್ದು, ಇಂದಿಗೂ ವಿಶ್ವದಲ್ಲಿ ಅತಿ ಹೆಚ್ಚು ಪುತ್ಥಳಿ ಅನಾವರಣಗೊಂಡ ಗಣ್ಯರಲ್ಲಿ ಅಂಬೇಡ್ಕರ್ ಮೊದಲಿಗರಾಗಿದ್ದಾರೆ. ವಿಶ್ವವೇ ಅಂಬೇಡ್ಕರ್ ಪಾಂಡಿತ್ಯಕ್ಕೆ ತಲೆಬಾಗಿದೆ. ಅವರು 8 ವರ್ಷ ಓದಬೇಕಿದ್ದ ಅರ್ಥಶಾಸ್ತ್ರವನ್ನು ಕೇವಲ 2ವರ್ಷ 6 ತಿಂಗಳಲ್ಲಿ ಪೂರ್ಣಗೊಳಿಸಿ ವಿಶ್ವವಿದ್ಯಾಲಯವನ್ನು ಬೆರಗುಗೊಳಿಸಿದ ಸಂಗತಿ ಇಂದಿಗೂ ಇತಿಹಾಸ ಎಂದರು.
ದೇಶದಲ್ಲಿ ಶೋಷಿತರ ಏಳಿಗೆಗೆ ಅಂಬೇಡ್ಕರ್ ಸಾಂವಿಧಾನಿಕ ಹಕ್ಕು ನೀಡಿ ಶಿಕ್ಷಣ, ರಾಜಕೀಯ ಶಕ್ತಿ ಅಗತ್ಯ ಎಂದು ಕರೆ ನೀಡಿದ್ದರು. ಶಿಕ್ಷಣದಿಂದ ಆಲೋಚನಾ ಶಕ್ತಿ ವೃದ್ಧಿಸಿಕೊಂಡು ರಾಜಕೀಯ ಬಲದಿಂದ ಸಮುದಾಯವನ್ನು ಸಂಘಟಿಸಿ ಸರ್ವರ ಅಭಿವೃದ್ಧಿಗೆ ಪೂರಕವಾಗುವ ಚಿಂತನೆ ಹೊಂದಿದ್ದರು ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ತಹಶೀಲ್ದಾರ್ ಮಂಜುನಾಥ್ ಮಾತನಾಡಿದರು. ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ದಲಿತ ಸಮುದಾಯ ನಾಲ್ಕು ಬೇಡಿಕೆಯನ್ನು ಸಭೆಗೆ ಓದಿ ತಿಳಿಸಿದರು. ವೇದಿಕೆಯಲ್ಲಿ ನಾಗರಾಜ್ ಮಲ್ಲಾಡಿ, ಡಿ.ಕುಮಾರ್, ನಗರಸಭೆ ಅಧ್ಯಕ್ಷ ಶರವಣ, ಆಯುಕ್ತೆ ಮಾನಸ, ದೇವರಾಜ ಒಡೆಯರ್ ಸೇರಿದಂತೆ ದಲಿತ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.