ADVERTISEMENT

ಗುಣಮುಖರ ಸಂಖ್ಯೆಯಲ್ಲಿ ಹೆಚ್ಚಳ

ಮೈಸೂರಿನ 22 ಕೋವಿಡ್‌ ಸಾವಿನಲ್ಲಿ ಮಂಡ್ಯ ಜಿಲ್ಲೆಯವರ ಮರಣ ಸಂಖ್ಯೆಯೇ 10

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:24 IST
Last Updated 21 ಜೂನ್ 2021, 16:24 IST

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖರಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳು ಇಳಿಮುಖವಾಗುತ್ತಿವೆ.

ಜಿಲ್ಲಾಡಳಿತದ ವರದಿಯಂತೆ ಸೋಮವಾರ 1,161 ಜನರು ಕೋವಿಡ್‌ ಪಿಡುಗಿನಿಂದ ಗುಣಮುಖರಾಗಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 6,892ಕ್ಕೆ ಇಳಿಕೆಯಾಗಿವೆ. 22 ಪೀಡಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯ ವಿವಿಧೆಡೆಯವರೇ ಹತ್ತು ಮಂದಿ ಇದ್ದಾರೆ.

ಇವರಲ್ಲಿ ಒಂಬತ್ತು ಜನರು ಮೈಸೂರಿನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದವರು. ಒಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ವರು ಮೇ ತಿಂಗಳಲ್ಲೇ ಮೃತಪಟ್ಟಿದ್ದರೆ; ಉಳಿದವರು ಜೂನ್‌ ಮೂರರಿಂದ 13ರವರೆಗಿನ ಅವಧಿಯಲ್ಲಿ ಮೃತಪಟ್ಟವರು.

ADVERTISEMENT

ಮೈಸೂರಿನ 12 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ವರದಿಯಲ್ಲಿದ್ದು, ಈ ಎಲ್ಲರೂ ಜೂನ್‌ 9ರಿಂದ ಸೋಮವಾರದವರೆಗೂ ಅಸುನೀಗಿದವರಾಗಿದ್ದಾರೆ. ಭಾನುವಾರ ಐವರು ಮೃತಪಟ್ಟಿದ್ದರೆ, ಸೋಮವಾರ ಸಹ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದುವರೆಗೂ ಮೈಸೂರಿನಲ್ಲಿ 2035 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

‌ಸೋಮವಾರ ಹೊಸದಾಗಿ 546 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. 452 ಜನರು ಪೀಡಿತರ ಪ್ರಾಥಮಿಕ ಸಂಪರ್ಕಿತರೇ ಆಗಿದ್ದಾರೆ. ಶೀತ, ಜ್ವರ ಲಕ್ಷಣ ಬಾಧಿಸಿದ್ದ 79 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 15 ಮಂದಿ ಸಹ ಪೀಡಿತರಾಗಿದ್ದಾರೆ.

ಮೈಸೂರು ನಗರದಲ್ಲಿ 275 ಜನರು ಸೋಂಕಿತರಾದರೆ, ತಾಲ್ಲೂಕಿನಲ್ಲಿ 59, ಎಚ್‌.ಡಿ.ಕೋಟೆಯಲ್ಲಿ 24, ಹುಣಸೂರು–46, ಕೆ.ಆರ್.ನಗರ–38, ನಂಜನಗೂಡು–29, ಪಿರಿಯಾಪಟ್ಟಣ–51, ತಿ.ನರಸೀಪುರ ತಾಲ್ಲೂಕಿನ 24 ಜನರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ.

3,771 ಜನರು ಮನೆಗಳಲ್ಲೇ ಐಸೋಲೇಷನ್‌ ಆಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ 424 ಮಂದಿ, ಖಾಸಗಿ ಆಸ್ಪತ್ರೆಗಳಲ್ಲಿ 1,451 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಹೆಲ್ತ್‌ ಕೇರ್‌ನಲ್ಲಿ 226 ಜನರಿದ್ದರೆ, ಖಾಸಗಿಯಲ್ಲಿ 204 ಜನರಿದ್ದಾರೆ. ಸರ್ಕಾರಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 816 ಮಂದಿಯಿದ್ದರೆ, ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಯಾರೊಬ್ಬರೂ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.