ADVERTISEMENT

ವಸ್ತುಪ್ರದರ್ಶನಕ್ಕೆ ‘ಅರ್ಬನ್‌ ಹಾತ್’ ಸ್ಪರ್ಶ

ಸ್ವದೇಶ್‌ ದರ್ಶನ್‌ ಅಡಿಯಲ್ಲಿ ₹100 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 16:18 IST
Last Updated 1 ಜನವರಿ 2023, 16:18 IST
ಹೊಸ ವರ್ಷದ ಮೊದಲ ದಿನವಾದ ಭಾನುವಾರ ಮೈಸೂರು ದಸರಾ ವಸ್ತುಪ್ರದರ್ಶನ ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು/ ಪ್ರಜಾವಾಣಿ ಚಿತ್ರ
ಹೊಸ ವರ್ಷದ ಮೊದಲ ದಿನವಾದ ಭಾನುವಾರ ಮೈಸೂರು ದಸರಾ ವಸ್ತುಪ್ರದರ್ಶನ ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು/ ಪ್ರಜಾವಾಣಿ ಚಿತ್ರ   

ಮೈಸೂರು: ಅರಮನೆ ಮುಂಭಾಗದಲ್ಲಿರುವ ದಸರಾ ವಸ್ತುಪ್ರದರ್ಶನವನ್ನು ‘ದೆಹಲಿಯ ಅರ್ಬನ್‌ ಹಾತ್’ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ.

‘ಸ್ವದೇಶ್‌ ದರ್ಶನ್‌ ಯೋಜನೆ ಅಡಿಯಲ್ಲಿ ವಿಶೇಷ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ರಾಜ್ಯದಿಂದ ಹಂಪಿ, ದಸರಾ ವಸ್ತುಪ್ರದರ್ಶನವನ್ನು ಆಯ್ಕೆ ಮಾಡಿ ಪತ್ರ ಕಳುಹಿಸಿದ್ದಾರೆ. ಯೋಜನೆ ರೂಪಿಸಿ, ಒಪ್ಪಿಗೆ ಪಡೆದು ಆದಷ್ಟು ಬೇಗ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸದ ಪ್ರತಾಪ ಸಿಂಹ ಯೋಜನೆ ಜಾರಿ ಸಂಬಂಧ ವಿಶೇಷ ಆಸಕ್ತಿ ವಹಿಸಿದ್ದು, ಆದಷ್ಟು ಬೇಗ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುತ್ತೇವೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಯೋಜನೆಗೆ ಆರಂಭಿಸುವ ಗುರಿ ಹೊಂದಲಾಗಿದೆ’ ಎಂದರು.

ADVERTISEMENT

‘ವಸ್ತುಪ್ರದರ್ಶನವು 80 ಎಕರೆ ವಿಸ್ತೀರ್ಣ ಹೊಂದಿದ್ದು, ₹100 ಕೋಟಿ ವೆಚ್ಚದಲ್ಲಿ ದೆಹಲಿಯ ಅರ್ಬನ್‌ ಹಾತ್ ಮಾದರಿಯಾಗಿಟ್ಟುಕೊಂಡು ಹೊಸತಾಗಿ ಕಟ್ಟಡ ರಚನೆ ನಿರ್ಮಿಸಲಾಗುತ್ತದೆ. ವರ್ಷಪೂರ್ತಿ ಮಳಿಗೆಗಳನ್ನು ತೆರೆದು, ಇಲ್ಲಿನ ಕಲೆ ಬೆಳವಣಿಗೆಗೆ ಹಾಗೂ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಪ್ರವಾಸಿಗರು ಒಂದೇ ಸ್ಥಳದಲ್ಲಿ ರಾಜ್ಯದ ಕಲೆ–ಸಂಸ್ಕೃತಿ ವೀಕ್ಷಿಸುವ ಜೊತೆಗೆ, ಕಲಾಕೃತಿಗಳ ಖರೀದಿಗೂ ಅವಕಾಶವಾಗಲಿದೆ’ ಎಂದರು.

ಹೊಸ ಮೆರುಗು: ‘ಮೈಸೂರಿಗೆ ಭೇಟಿ ನೀಡುವವರು ಹೆಚ್ಚಾಗಿ ಚಾಮುಂಡಿಬೆಟ್ಟ, ಮೃಗಾಲಯ, ಅರಮನೆಗೆ ತೆರಳಿ ಹಿಂತಿರುಗುತ್ತಾರೆ. ವಸ್ತುಪ್ರದರ್ಶನ ಆವರಣವು ವರ್ಷದಲ್ಲಿ ಮೂರು ತಿಂಗಳ ಕಾಲವಷ್ಟೆ ಚಟುವಟಿಕೆಯಿಂದ ಕೂಡಿರುತ್ತಿತ್ತು. ಇದೀಗ ಅಭಿವೃದ್ಧಿಪಡಿಸಿದರೆ, ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

ವಸ್ತುಪ್ರದರ್ಶನದ ಆವರಣದ ಕಾರಂಜಿ ಕಟ್ಟಡದಲ್ಲಿ ಕಾವೇರಿ ಕಲಾ ಗ್ಯಾಲರಿ, ಪ್ರಾಚ್ಯವಸ್ತು ಸಂಗ್ರಹಾಲಯವಿದ್ದು, ಈಗಾಗಲೇ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದೆ. ಆವರಣದಲ್ಲಿ ಸಾಕಷ್ಟು ಪಾರ್ಕಿಂಗ್‌ ಸೌಲಭ್ಯವಿದೆ. ಪ್ರವಾಸಿಗರಿಗೂ ಹೆಚ್ಚಿನ ಸಮಯ ಕಳೆಯಲು ಹೊಸ ಯೋಜನೆ ಜಾರಿಯಿಂದ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.