ADVERTISEMENT

ದೇಶದಲ್ಲಿ ಮಹಿಳೆಯ ಆಸೆ ಹತ್ತಿಕ್ಕುವ ಪ್ರಯತ್ನ: ಅನಿತಾ ನಾಯರ್ ವಿಷಾದ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 8:03 IST
Last Updated 19 ಅಕ್ಟೋಬರ್ 2019, 8:03 IST
 ಲೇಖಕಿ ಅನಿತಾ ನಾಯರ್
ಲೇಖಕಿ ಅನಿತಾ ನಾಯರ್    

ಮೈಸೂರು: 'ಮಹಿಳೆಯರ ಆಸೆಗಳನ್ನು ಹತ್ತಿಕ್ಕುವ ಪ್ರಯತ್ನ ಭಾರತದಲ್ಲಿ ಆಗುತ್ತಿದೆ' ಎಂದು ಲೇಖಕಿ ಅನಿತಾ ನಾಯರ್ ವಿಷಾದ ವ್ಯಕ್ತಪಡಿಸಿದರು.

ಮೈಸೂರು ಲಿಟರರಿ ಅಸೋಸಿಯೇಷನ್ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ಲಿಟರರಿ ಫೆಸ್ಟ್ 2019 ಕಾರ್ಯಕ್ರಮದಲ್ಲಿ ಅವರು 'ಆಸೆಯ ರಾಜಕಾರಣ' ಕುರಿತು ಮಾತನಾಡಿದರು.

'ಆಸೆ ಪ್ರಕೃತಿ ಸಹಜವಾದುದು. ಅದನ್ನು ಹತ್ತಿಕ್ಕುವ, ನಿಯಂತ್ರಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಈ ಮೂಲಭೂತ ಹಕ್ಕಿನಿಂದ ಮಹಿಳೆಯನ್ನು ವಂಚಿಸಲಾಗುತ್ತಿದೆ. ತನ್ನೆಲ್ಲ ಆಸೆಗಳನ್ನು ಅದುಮಿಟ್ಟುಕೊಂಡು ಖಿನ್ನಳಾಗುವ ಪರಿಸ್ಥಿತಿ ಭಾರತದ ಮಹಿಳೆಗಿದೆ' ಎಂದು ಬೇಸರದಿಂದ ಹೇಳಿದರು.

ADVERTISEMENT

'ಆಸೆಯಿದೆ ಎಂದು ಒಪ್ಪಿಕೊಳ್ಳುವ ಎದೆಗಾರಿಕೆ ನಮಗೆ ಬರಬೇಕು. 'ಆಸೆಯೇ ದುಃಖಕ್ಕೆ ಮೂಲ ಕಾರಣ' ಎಂಬ ಬುದ್ಧನ ಪ್ರತಿಪಾದನೆಯನ್ನು ಒಪ್ಪಲೇಬೇಕು ಎಂದೇನೂ ಇಲ್ಲ. ಆಸೆಯ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಸುಖ, ದುಃಖಗಳೆರಡನ್ನೂ ಸಮಾನವಾಗಿ ಅನುಭವಿಸಬೇಕು' ಎಂದು ಅಭಿಪ್ರಾಯಪಟ್ಟರು.

'ಮಹಿಳೆಯ ಆಸೆ ಒಂದು ಹಣ್ಣಿನ ಬಗ್ಗೆಯೇ ಆಗಲಿ, ಪುರುಷನ ಬಗ್ಗೆಯಾಗಲಿ, ಅಧಿಕಾರದ ಬಗ್ಗೆಯಾಗಲಿ; ಅದನ್ನು ತಪ್ಪೆಂದು ಕರೆಯುವ ಅಧಿಕಾರ‌ ಯಾರಿಗೂ ಇಲ್ಲ' ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.