
ಮೈಸೂರು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಜಾರಿಗೊಳಿಸಲಾಗಿರುವ ‘ಅನ್ನಸುವಿಧಾ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯೋಜನೆ ನವೆಂಬರ್‌ನಿಂದ ಜಾರಿಗೆ ಬಂದಿದೆ. 75 ವರ್ಷ ವಯಸ್ಸು ಮೇಲ್ಪಟ್ಟ ಇಕೈವೈಸಿ ಆಗಿರುವ ಏಕ ಸದಸ್ಯ ಕಾರ್ಡ್‌ಗಳಿಗೆ ಯೋಜನೆ ಅನ್ವಯಗೊಳಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳ ಪಿಒಎಸ್ ಲಾಗ್‌ಇನ್‌ನಲ್ಲಿ ಅನ್ನಸುವಿಧಾಕ್ಕೆ ಹೊಸ ಅವಕಾಶ ಕಲ್ಪಿಸಲಾಗಿದೆ. ವಯೋಸಹಜವಾದ ಅನಾರೋಗ್ಯ ಮೊದಲಾದ ಸಮಸ್ಯೆಗಳನ್ನು ಎದುರಿಸುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಬಹಳಷ್ಟು ವೃದ್ಧರು ಮುಂದೆ ಬಾರದಿರುವುದು ಅಂಕಿ–ಅಂಶಗಳಿಂದ ದೃಢಪಟ್ಟಿದೆ.
ಯೋಜನೆಯಡಿ, 1,016 ನ್ಯಾಯಬೆಲೆ ಅಂಗಡಿಗಳ 16,889 ಪಡಿತರ ಚೀಟಿದಾರರನ್ನು ‘ಅನ್ನಸುವಿಧಾ’ಕ್ಕೆ ಅರ್ಹರೆಂದು ಗುರುತಿಸಲಾಗಿದೆ. ಕೋರಿದವರಿಗೆ (ವಿಲ್ಲಿಂಗ್‌ನೆಸ್) ಇಲಾಖೆಯಿಂದಲೇ ಸಿಬ್ಬಂದಿ ಮೂಲಕ ಅವರವರ ಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಆದರೆ, 875 ಮಂದಿಯಷ್ಟೆ ಆಸಕ್ತಿ ವ್ಯಕ್ತಪಡಿಸಿದ್ದು, ಅವರಲ್ಲಿ 69 ಮಂದಿಗೆ ಮಾತ್ರವೇ ನೇರವಾಗಿ ಮನೆಗೇ ಪಡಿತರವನ್ನು ತಲುಪಿಸಲಾಗಿದೆ. ಅಂದರೆ ಶೇ ಪ್ರಗತಿಯಾಗಿರುವುದು 0.41ರಷ್ಟು ಮಾತ್ರ!.
ಲಾಗ್‌ಇನ್‌ನಲ್ಲಿ ಅವಕಾಶ:
ಇಲಾಖೆಯಿಂದ ನ್ಯಾಯಬೆಲೆ ಅಂಗಡಿ ಲಾಗ್‌ಇನ್‌ನಲ್ಲಿ ಅರ್ಹ ಕಾರ್ಡ್‌ಗಳನ್ನು ಸೇರಿಸಲಾಗಿದೆ. ಅವರಿಗೆ ಪಡಿತರ ನೀಡುವ ದಿನಾಂಕವನ್ನೂ ನಿಗದಿಪಡಿಸಲಾಗುತ್ತದೆ. ಪ್ರತಿ ತಿಂಗಳು 6ರಿಂದ 15ನೇ ತಾರೀಖಿನವರೆಗೆ ಮಾತ್ರ ಮನೆ ಬಾಗಿಲಿಗೆ ಬಂದು ಒಟಿಪಿ ಹಾಗೂ ಬಯೊಮೆಟ್ರಿಕ್ ಪಡೆದು ಅನ್ನಸುವಿಧಾ ಅಡಿ ಪಡಿತರ ವಿತರಿಸುವ ಪ್ರಕ್ರಿಯೆ ನಡೆಯುತ್ತದೆ.
ಮನೆ ಬಾಗಿಲಿಗೆ ಪಡಿತರ ನೀಡುವ ಕಾರ್ಯಕ್ಕೆ ಪ್ರತಿಯಾಗಿ ನ್ಯಾಯಬೆಲೆ ಅಂಗಡಿಯವರಿಗೆ ಪ್ರತಿ ಕಾರ್ಡ್‌ನ ವಿತರಣೆಗೆ ₹ 50 ನಿಗದಿಪಡಿಸಲಾಗಿದೆ. ಮನೆಗೆ ಹೋಗಿ ಪಡಿತರ ತಲುಪಿಸಿದ ನಂತರ, ಲಾಗ್‌ಇನ್‌ನಲ್ಲಿ ಪ್ರಿಂಟ್ ಮಾಡಿ ಆಹಾರ ನಿರೀಕ್ಷಕರಿಗೆ ಮಾಹಿತಿ ಸಲ್ಲಿಸಬೇಕಾಗುತ್ತದೆ. 75 ವರ್ಷ ವಯಸ್ಸಿನವರು ಪ್ರತಿ ತಿಂಗಳು 1ರಿಂದ 5ನೇ ತಾರೀಖಿನೊಳಗೆ ಕೋರಿಕೆ ಸಲ್ಲಿಸಬೇಕು.
ಬಜೆಟ್‌ನಲ್ಲಿ ಹೇಳಿದಂತೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿನ ಬಜೆಟ್‌ನಲ್ಲಿ ಅನ್ನಸುವಿಧಾ ಯೋಜನೆ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದ್ದರು. ಅದರ ಅನುಷ್ಠಾನಕ್ಕೆ ಇಲಾಖೆ ಕ್ರಮ ಕೈಗೊಂಡಿದೆ. ಆದರೆ, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ದೊಡ್ಡಮಟ್ಟದ ಪ್ರತಿಕ್ರಿಯೆಯೇನೂ ಕಂಡುಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
‘ಕೆಲವೆಡೆ ಮನೆಗಳಿಗೆ ತಲುಪಿಸುವುದು ವಿಳಂಬವಾಗುತ್ತಿದೆ. ಅಲ್ಲಿವರೆಗೆ ಕೆಲವರು ಕಾಯುವುದಿಲ್ಲ. ಪಡಿತರ ಸಿಗದೇ ಹೋದೀತೆಂಬ ಅಥವಾ ನ್ಯಾಯಬೆಲೆ ಅಂಗಡಿಯವರು ವಂಚಿಸಿಬಿಡುತ್ತಾರೇನೋ ಎಂಬ ಆತಂಕದಿಂದ ಕೆಲವರು ತಾವಾಗಿಯೇ ಒಯ್ದಿರುವುದೂ ಇದೆ’ ಎಂಬ ಮಾತು ಕೇಳಿಬಂದಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ‘ಕೋರಿಕೆ ಸಲ್ಲಿಸಿದವರಲ್ಲಿ ಹಲವರು ಅವರಾಗಿಯೇ ಆಯಾ ನ್ಯಾಯಬೆಲೆ ಅಂಗಡಿಗೆ ಬಂದು ಪಡಿತರ (10 ಕೆ.ಜಿ. ಅಕ್ಕಿ) ತೆಗೆದುಕೊಂಡು ಹೋಗಿದ್ದಾರೆ. ಕೆಲವರಿಗೆ ಮನೆಗಳಿಗೇ ತಲುಪಿಸಲಾಗಿದೆ. ಯೋಜನೆಯ ಲಾಭ ಪಡೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಅನ್ನಸುವಿಧಾದಲ್ಲಿ ಬಿಪಿಎಲ್ ಅಂತ್ಯೋದಯ ಕಾರ್ಡ್‌ದಾರರಿಬ್ಬರೂ ಅರ್ಹರಿದ್ದಾರೆ. ಮುಂದಿನ ತಿಂಗಳಿಂದ ಹೆಚ್ಚಿನವರಿಗೆ ಮನೆಗಳಿಗೇ ತಲುಪಿಸುವಂತೆಡ ಸೂಚಿಸಲಾಗಿದೆಮಂಟೇಸ್ವಾಮಿ ಜಂಟಿ ನಿರ್ದೇಶಕ ಆಹಾರ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.