ADVERTISEMENT

ಸಿಎಎ ಪರ ಪ್ರದರ್ಶನ, ವಿರುದ್ಧ ಪ್ರತಿಭಟನೆ

ಓವಲ್ ಮೈದಾನದಲ್ಲಿ ಪರವಾಗಿ ಪ್ರದರ್ಶನ, ಮಹಾತ್ಮ ಗಾಂಧಿ ಚೌಕದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 12:08 IST
Last Updated 23 ಡಿಸೆಂಬರ್ 2019, 12:08 IST
ಮೈಸೂರಿನಲ್ಲಿ ಮಹಾತ್ಮ ಗಾಂಧಿ ಚೌಕದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಕಾಂಗ್ರೆಸ್‌ ಜಿಲ್ಲಾ (ಗ್ರಾಮಾಂತರ) ಘಟಕದ ನೇತೃತ್ವದಲ್ಲಿ ಭಾನುವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮೈಸೂರಿನಲ್ಲಿ ಮಹಾತ್ಮ ಗಾಂಧಿ ಚೌಕದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಕಾಂಗ್ರೆಸ್‌ ಜಿಲ್ಲಾ (ಗ್ರಾಮಾಂತರ) ಘಟಕದ ನೇತೃತ್ವದಲ್ಲಿ ಭಾನುವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಪ್ರದರ್ಶನ ಹಾಗೂ ವಿರುದ್ಧವಾಗಿ ಪ್ರತಿಭಟನೆಗಳು ಭಾನುವಾರ ನಗರದಲ್ಲಿ ನಡೆದವು. ಬಿಜೆಪಿ ಹಾಗೂಮತ್ತಿತರ ಸಂಘಟನೆಗಳು ಪರವಾಗಿ ಓವಲ್ ಮೈದಾನದಲ್ಲಿ ಪ್ರದರ್ಶನ ನಡೆಸಿದರೆ, ಮಹಾತ್ಮ ಗಾಂಧಿ ಚೌಕದಲ್ಲಿ ಕಾಂಗ್ರೆಸ್ (ಗ್ರಾಮಾಂತರ) ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ಮೊದಲಿಗೆ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಕಾಯ್ದೆಯ ಪರವಾಗಿ ಪ್ರದರ್ಶನ ನಡೆಸಲು ಕಾರ್ಯಕರ್ತರು ಯತ್ನಿಸಿದರು. ಇದಕ್ಕೆ ತಡೆಯೊಡ್ಡಿದ ಪೊಲೀಸರು ನಿಷೇಧಾಜ್ಞೆ ಹೇರಲಾಗಿದೆ. ಈ ರೀತಿ ಬಹಿರಂಗವಾಗಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಬಳಿಕ ಓವಲ್ ಮೈದಾನದಲ್ಲಿ ಸೇರಿ ಘೋಷಣೆ ಕೂಗಿದರು. ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಾರಿದರು.

ADVERTISEMENT

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಕಾಯ್ದೆಯಿಂದಾಗಿ ಭಾರತದ ಯಾವುದೇ ಧರ್ಮದ ಪ್ರಜೆಗಳಿಗೆ ತೊಂದರೆಯಾಗುವುದಿಲ್ಲ. ಅಕ್ರಮ ವಲಸಿಗರಿಗಷ್ಟೇ ತೊಂದರೆಯಾಗುತ್ತದೆ. ಇದನ್ನು ಧರ್ಮಗುರುಗಳಾದ ಅಹಮ್ಮದ್ ಬುಖಾರಿಯವರೇ ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಹುನ್ನಾರ ಇದು. ಕಾಯ್ದೆಯಲ್ಲಿರುವ ಅಂಶಗಳನ್ನು ಜನರ ಮುಂದಿಡಬೇಕು ಎಂದು ಅವರು ಆಗ್ರಹಿಸಿದರು.

ಮುಖಂಡರಾದ ತೋಂಟದಾರ್ಯ, ಬಿ.ಪಿ.ಮಂಜುನಾಥ್‌, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ, ಮುಖಂಡರಾದ ಸಂದೇಶ್‌ಸ್ವಾಮಿ, ಹೇಮಂತಕುಮಾರ್‌ಗೌಡ, ಪಾಲಿಕೆ ಸದಸ್ಯರಾದ ಸುನಂದಾ ಪಾಲನೇತ್ರ, ಪ್ರಮೀಳಾ ಭರತ್, ರಂಗಸ್ವಾಮಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.